ಅಂಕೋಲಾ: ತಾಲೂಕು ಬಂಗಾರಪ್ಪ ಅಭಿಮಾನಿಗಳ ಸಂಘದ ವತಿಯಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 94ನೇ ಹುಟ್ಟುಹಬ್ಬವನ್ನು ಪಟ್ಟಣದ ಕಾಕರಮಠದಲ್ಲಿರುವ ನಾಮಧಾರಿ ಸಭಾಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ತಾಲೂಕು ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಉದಯ್ ಆರ್. ನಾಯ್ಕ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜ ಹಾಗೂ ಧರ್ಮದ ಮುಖಂಡರು ಭಾಗವಹಿಸಿ, ಬಂಗಾರಪ್ಪನವರ ನಾಯಕತ್ವ ಮತ್ತು ಆದರ್ಶಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ನಾಮಧಾರಿ ಒಕ್ಕೂಟದ (ರಿ.) ಅಧ್ಯಕ್ಷರಾದ ನಾಗೇಶ್ ವಿ. ನಾಯ್ಕ ಮಾತನಾಡಿ, “ಬಂಗಾರಪ್ಪನವರು ತಮ್ಮದೇ ಆದ ವಿಶಿಷ್ಟ ಶೈಲಿಯ ನಾಯಕತ್ವ ಗುಣಗಳಿಂದ ‘ಬಡವರ ಬಂಧು’ ಎಂದು ಕರೆಸಿಕೊಂಡವರು. ಎಲ್ಲರ ನೆಚ್ಚಿನ ನಾಯಕರಾಗಿದ್ದ ಅವರು, ನಮ್ಮ ಸಮಾಜಕ್ಕೆ ಮಾತ್ರವಲ್ಲದೆ ಇಡೀ ನಾಡಿಗೆ ಮಾದರಿಯಾಗಿದ್ದಾರೆ” ಎಂದು ನುಡಿನಮನ ಅರ್ಪಿಸಿದರು.
ಅನ್ಯ ಧರ್ಮದ ಮುಖಂಡರಾದ ನವಾಜ್ ಶರೀಫ್ ಅವರು ಬಂಗಾರಪ್ಪನವರ ಜಾತ್ಯತೀತ ನಿಲುವು ಹಾಗೂ ಆದರ್ಶಗಳನ್ನು ಗುಣಗಾನ ಮಾಡಿದರು. ಹಾಗೆಯೇ ಇತರ ಸಮಾಜದ ಮುಖಂಡರಾದ ಗೋಪಾಲ್ ಶೆಡಗೇರಿ (ಮಾಸ್ಟರ್) ಮಾತನಾಡಿ, “ಬಂಗಾರಪ್ಪನವರ ಸ್ಪಷ್ಟ ನಿಲುವು, ನಾಯಕತ್ವದ ಗುಣ ಹಾಗೂ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶವಾಗಬೇಕು” ಎಂದು ಅಭಿಮಾನ ವ್ಯಕ್ತಪಡಿಸಿದರು.
ನಾಮಧಾರಿ ಸಮಾಜದ ಪ್ರಮುಖರಾದ ಗೋವಿಂದ್ರಾಯ ಕೆ. ನಾಯ್ಕ ಅವರು, “ಬಂಗಾರಪ್ಪನವರು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ನಾಯಕರಾಗಿರಲಿಲ್ಲ. ಅವರು ಇತರ ಸಮಾಜ ಮತ್ತು ಧರ್ಮದವರ ಪ್ರೀತಿ, ಮೆಚ್ಚುಗೆಗೂ ಪಾತ್ರರಾದ ಜನನಾಯಕರಾಗಿದ್ದರು” ಎಂದು ನೆನಪಿಸಿಕೊಂಡರು.
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಪ್ರಮುಖರಾದ ಏಕನಾಥ ಎಸ್. ನಾಯ್ಕ, ಮೋಹನ ಎಚ್. ನಾಯ್ಕ, ವಿಠ್ಠಲ ಎಂ. ನಾಯ್ಕ, ರಮೇಶ್ ಎಸ್. ನಾಯ್ಕ, ಹೊನ್ನಪ್ಪ ಎಂ. ನಾಯ್ಕ, ವಿಜಯ ಎಂ. ನಾಯ್ಕ, ಮುರ್ಕುಂಡಿ ಪಿ. ನಾಯ್ಕ, ಗಣಪತಿ ಬಿ. ನಾಯ್ಕ, ಶ್ರೀಧರ ಡಿ. ನಾಯ್ಕ, ಶ್ರೀಧರ್ ಎಸ್. ನಾಯ್ಕ, ಕೊಮಾರಪಂತ್ ಸಮಾಜದ ಮುಖಂಡರಾದ ಗಣೇಶ ನಾಯ್ಕ ಸೇರಿದಂತೆ ಹಲವು ಅಭಿಮಾನಿಗಳು ಹಾಜರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಬಂಗಾರಪ್ಪ ಅಭಿಮಾನಿ ಸಂಘದ ಅಧ್ಯಕ್ಷರಾದ ಉದಯ ಆರ್. ನಾಯ್ಕ ಅವರು ಸೇರಿದ್ದ ಎಲ್ಲರಿಗೂ ಸಿಹಿ ವಿತರಿಸಿದರು. ರಾಜೇಶ್ ಎಂ. ನಾಯ್ಕ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು.
ವರದಿ : ಚಂದನ ನಾಯ್ಕ, ಅಂಕೋಲಾ

