ಅಂಕೋಲಾ: ತಾಲೂಕಿನ ಪ್ರಮುಖ ಸಂಪರ್ಕ ಸೇತುವೆಯಾಗಿರುವ ಪೂಜಗೇರಿ ಸೇತುವೆ ತೀವ್ರವಾಗಿ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಭಾರಿ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಮಾನ್ಯ ಜಿಲ್ಲಾಧಿಕಾರಿಗಳು ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಕೆಲವೇ ದಿನ ಸೀಮಿತವಾಗಿದ್ದು, ಬೃಹತ್ ವಾಹನಗಳ ಪ್ರವೇಶ ತಡೆಯಲು ಅಳವಡಿಸಲಾಗಿದ್ದ ಹೈಟ್ ಬ್ಯಾರಿಕೇಡ್ ಕಬ್ಬಿಣದ ಆ್ಯಂಗಲ್ ಅನ್ನೇ ಕತ್ತರಿಸಿ ಹಾಕಿ, ಯಮಸ್ವರೂಪಿ ಬೃಹತ್ ವಾಹನಗಳ ಓಡಾಟಕ್ಕೆ ರಾಜಮಾರ್ಗ ಸೃಷ್ಟಿಸಿಕೊಂಡಿದ್ದಾರೆ.
ಸೇತುವೆಯ ದುಸ್ಥಿತಿಯನ್ನು ಅರಿತು, ಜಿಲ್ಲಾಡಳಿತದ ಆದೇಶಕ್ಕೆ ತಲೆಬಾಗಿ ಸರ್ಕಾರಿ ಸಾರಿಗೆ ಬಸ್ಗಳು, ಶಾಲಾ ವಾಹನಗಳು ಹಾಗೂ ಇತರ ಅಗತ್ಯ ಸೇವಾ ವಾಹನಗಳು ಪ್ರತಿದಿನ ಹಲವು ಕಿಲೋಮೀಟರ್ಗಳಷ್ಟು ಸುತ್ತುವರಿದು, ಪ್ರಯಾಸದಿಂದ ಬೇರೆ ಮಾರ್ಗದ ಮೂಲಕ ಸಂಚರಿಸುತ್ತಿವೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಎಷ್ಟೇ ಕಷ್ಟವಾದರೂ ಸಹಕರಿಸುತ್ತಿರುವ ಈ ಸಂದರ್ಭದಲ್ಲಿ, ಕೆಲ ಖಾಸಗಿ ಬ್ರಹತ್ ವಾಹನಗಳು ಮಾತ್ರ ತಮ್ಮ ಲಾಭದಾಸೆಗಾಗಿ ಮತ್ತು ಇಂಧನ ಉಳಿಸುವ ದುರುದ್ದೇಶದಿಂದ ಅಡ್ಡದಾರಿ ಹಿಡಿದಿದ್ದಾರೆ.
ಸೇತುವೆಯ ಪ್ರವೇಶ ದ್ವಾರದಲ್ಲಿ ಕೇವಲ ಲಘು ವಾಹನಗಳು (ಕಾರು, ಬೈಕ್, ಆಟೋ) ಮಾತ್ರ ಹಾದುಹೋಗಲು ಅನುಕೂಲವಾಗುವಂತೆ ಅಡ್ಡಲಾಗಿ ಹಾಕಿದ್ದ ದಪ್ಪನೆಯ ಕಬ್ಬಿಣದ ಆ್ಯಂಗಲ್ ಅನ್ನು ವ್ಯವಸ್ಥಿತವಾಗಿ ಕತ್ತರಿಸಿ ಹಾಕಲಾಗಿದೆ. ಇದು ಆಡಳಿತ ವ್ಯವಸ್ಥೆಗೆ ಎಸೆದ ನೇರ ಸವಾಲಾಗಿದೆ. ಹಗಲು ಹೊತ್ತಿನಲ್ಲೇ ಇಂತಹ ಬೃಹತ್ ವಾಹನಗಳು ಚಲಿಸುತ್ತಿದ್ದರು, ಹಲವು ದಿನಗಳ ಹಿಂದೆ ಹೈಟ್ ಬ್ಯಾರಿಕೇಡ್ ತೆಗೆದುಹಾಕಿದ್ದರು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಇದು ಬಾರದಿರುವುದು ವಿಶೇಷವಾಗಿದೆ.
ಸಾಮರ್ಥ್ಯಕ್ಕೂ ಮೀರಿದ ಸಾವಿರಾರು ಟನ್ ಭಾರ ಹೊತ್ತ ಈ ಟ್ರಕ್ಗಳು ಸಂಚರಿಸುವಾಗ ಶಿಥಿಲಗೊಂಡಿರುವ ಸೇತುವೆ ಅಕ್ಷರಶಃ ನಡುಗುತ್ತಿದ್ದು, ಇದು ಯಾವತ್ತಿದ್ದರೂ ಭಾರಿ ದುರಂತಕ್ಕೆ ಮುನ್ನುಡಿ ಬರೆಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಲೋಕೋಪಯೋಗಿ ಇಲಾಖೆಯವರು ಬರಿ ಬೋರ್ಡ್ ಹಾಕಿ ಕೈ ತೊಳೆದುಕೊಂಡರೆ ಸಾಲದು ಸಾರ್ವಜನಿಕ ಆಸ್ತಿಯನ್ನು ಉಳಿಸಲು ಇತ್ತ ಸ್ವಲ್ಪ ಗಮನ ಹರಿಸಿ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕೂಡಲೇ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ಸಂಚರಿಸುವ ಬೃಹತ್ ವಾಹನಗಳನ್ನು ಜಪ್ತಿ ಮಾಡಬೇಕಿದೆ. ಜೊತೆಗೆ, ಹೈಟ್ ಬ್ಯಾರಿಕೇಡ್ ಅನ್ನು ಮರುಜೋಡಿಸಿ, ಮುಂದಾಗುವ ಅನಾಹುತ ತಪ್ಪಿಸಲು ಮುಂದಾಗಬೇಕಿದೆ.


