ಅಂಕೋಲಾ: ತಾಲೂಕಿನ ಕಲ್ಲೇಶ್ವರ ಗ್ರಾಮದ ಅಡಿಕೆ ತೋಟವೊಂದರಲ್ಲಿ ರಾತ್ರೋರಾತ್ರಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ಪಾಪಿಗಳ ತಂಡದ ಮೇಲೆ ರಾಮನಗುಳಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಕೃತ್ಯವೆಸಗಿದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಐವರು ಪಾಪಿಗಳು ಕತ್ತಲಲ್ಲಿ ತಲೆಮರೆಸಿಕೊಂಡಿದ್ದಾರೆ. ಅಕ್ಟೋಬರ್ 16ರಂದು ರಾತ್ರಿ ಗಸ್ತು ತಿರುಗುತ್ತಿದ್ದಾಗ ಬಂದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಸಿಬ್ಬಂದಿಗಳು ಈ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
ಕಲ್ಲೇಶ್ವರ ಗ್ರಾಮದ ಸರ್ವೆ ನಂಬರ್ 30ಅ ರಲ್ಲಿರುವ ಲಕ್ಷ್ಮಣ ಬಾಬು ಸಿದ್ದಿ ಎಂಬುವವರ ಅಡಿಕೆ ತೋಟದಲ್ಲಿ 5 ರಿಂದ 6 ಜನರ ಪಾಪಿಗಳ ತಂಡವೊಂದು ಮುಗ್ಧ ಕಡವೆಯನ್ನು ಕೊಂದು, ಅದರ ಚರ್ಮ ಸುಲಿದು ಮಾಂಸವನ್ನು ಚೀಲಗಳಿಗೆ ತುಂಬುತ್ತಿತ್ತು. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳು, ಕೃತ್ಯವೆಸಗಿದ್ದವರ ಪೈಕಿ ಚನ್ನೇಮನೆ (ಕಲ್ಲೇಶ್ವರ) ನಿವಾಸಿ, ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ನಾರಾಯಣ ಗುರಕ್ಯಾ ಸಿದ್ದಿ (60) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಅಂಕೋಲಾದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆ ವೇಳೆ ಕತ್ತಲಿನ ಲಾಭ ಪಡೆದು ತಲೆಮರೆಸಿಕೊಂಡಿರುವ ಇತರ ಐವರು ಪಾಪಿಗಳಾದ ಕನಕನಹಳ್ಳಿಯ (ಹಳವಳ್ಳಿ) ಗಣೇಶ ರಾಮು ರಾಠೋಡ (27), ಕಲ್ಲೇಶ್ವರದ ಲಕ್ಷ್ಮಣ ಬಾಬು ಸಿದ್ದಿ (55), ಲೋಕೇಶ ನಾರಾಯಣ ಸಿದ್ದಿ (50), ಶಿವರಾಜ ಲಕ್ಷ್ಮಣ ಸಿದ್ದಿ (30) ಹಾಗೂ ರಾಜು ಕೃಷ್ಣಾ ಸಿದ್ದಿ (45) ಅವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಈ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ವನ್ಯಜೀವಿ ಗುನ್ನೆ ಪ್ರಕರಣ (WLOR No-01/2026-27) ದಾಖಲಿಸಿಕೊಳ್ಳಲಾಗಿದೆ.

ಘಟನಾ ಸ್ಥಳದಿಂದ ಕಡವೆಯ ಮಾಂಸ ತುಂಬಿದ ಒಂದು ಪ್ಲಾಸ್ಟಿಕ್ ಚೀಲ, ತಲೆ, ಕಾಲು ಮತ್ತು ಚರ್ಮ ಇದ್ದ ಮತ್ತೊಂದು ಚೀಲ ಹಾಗೂ ಕರುಳು, ಜಠರ ತುಂಬಿದ್ದ ಇನ್ನೊಂದು ಪ್ಲಾಸ್ಟಿಕ್ ಚೀಲವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಈ ಪಾಪಿಗಳು ಕೃತ್ಯಕ್ಕೆ ಬಳಸಿದ್ದ ಮೂರು ಕಬ್ಬಿಣದ ಕತ್ತಿ, ಒಂದು ಚಾಕು, ಒಂದು ಹೆಡ್-ಟಾರ್ಚ್ ಮತ್ತು ಅಂದಾಜು 1.5 ಲಕ್ಷ ರೂ. ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು (ಯಮಹಾ R15 – KA-30 X-4805 ಹಾಗೂ ಪಲ್ಸರ್ NS-125 – KA-31 ED 2746) ಸರ್ಕಾರಿ ಪರವಾಗಿ ಜಪ್ತಿ ಮಾಡಲಾಗಿದೆ.
ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್. ಮಾರಿಯಪ್ಪ ಅವರ ನಿರ್ದೇಶನ ಹಾಗೂ ಅಂಕೋಲಾ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಫುಲ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ್ ಎ. ನಾಯ್ಕ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ ಕಲ್ಲಪ್ಪ ಹಟ್ಟಿ, ಅಕ್ಷಯ ಇ.ಎಂ., ಸಂತೋಷ ಕರಚಕಟ್ಟಿ ಹಾಗೂ ಗಸ್ತು ಅರಣ್ಯ ಪಾಲಕರಾದ ಸತೀಶ ಮರ್ಚಪ್ಪನವರ, ಅಲ್ಮಾಸ್ ಬಿಜಾಪುರ, ಪ್ರಭುದೇವ ಮಣಕವಾಡ, ಸೋಮನಾಥ ಕಂಬಾರ, ವಾಹನ ಚಾಲಕರು ಮತ್ತು ದಿನಗೂಲಿ ನೌಕರರು ಪಾಲ್ಗೊಂಡಿದ್ದರು.


