ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಪ್ರಕೃತಿ ಸಿರಿಯಿಂದ ಕಂಗೊಳಿಸುವ ಸುಂದರ ‘ವಿಭೂತಿ ಜಲಪಾತ’ವು ಪ್ರವಾಸಿಗರ ಹಾಟ್ ಫೇವರಿಟ್ ತಾಣ. ಆದರೆ, ಹಸಿರು ಪರಿಸರ ಹಾಗೂ ಮನಮೋಹಕ ಜಲಧಾರೆಯಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ತಾಣ, ಇಂದು ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಸೊರಗುತ್ತಿದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳಿದ್ದರೂ, ಸೂಕ್ತ ರಸ್ತೆ ಸಂಪರ್ಕ, ಶೌಚಾಲಯ, ಕುಡಿಯುವ ನೀರು ಹಾಗೂ ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವುದು ಪ್ರವಾಸಿಗರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿದೆ.
ಗುಂಡಿಮಯ ರಸ್ತೆ, ಪ್ರಯಾಣವೇ ದುಸ್ತರ: ವಿಭೂತಿ ಜಲಪಾತಕ್ಕೆ ತೆರಳುವ ಸಂಪರ್ಕ ರಸ್ತೆಯ ದುರವಸ್ಥೆ ಪ್ರವಾಸಿಗರ ಅತಿ ದೊಡ್ಡ ಸಮಸ್ಯೆಯಾಗಿದೆ. ಕಿರಿದಾದ ರಸ್ತೆ ಹಾಗೂ ಹೆಜ್ಜೆಗೊಂದಿರುವ ಬೃಹತ್ ಗುಂಡಿಗಳಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ದೂರದೂರುಗಳಿಂದ ಕುಟುಂಬ ಸಮೇತ ಬರುವ ಪ್ರವಾಸಿಗರು ಈ ರಸ್ತೆಯ ದುಸ್ಥಿತಿ ಕಂಡು ಹಿಡಿಶಾಪ ಹಾಕುತ್ತಿದ್ದಾರೆ.

ಪ್ರವಾಸಿಗರು ಸುಲಭವಾಗಿ ಹಾಗೂ ಸುರಕ್ಷಿತವಾಗಿ ತಲುಪಲು ಈ ಸಂಪರ್ಕ ರಸ್ತೆಯನ್ನು ಆದ್ಯತೆಯ ಮೇರೆಗೆ ದುರಸ್ತಿಗೊಳಿಸಬೇಕು ಎಂಬುದು ಪ್ರವಾಸಿಗರ ಪ್ರಮುಖ ಆಗ್ರಹವಾಗಿದೆ.
ಮೂಲಭೂತ ಸೌಕರ್ಯಗಳ ಕೊರತೆ: ದಿನೇ ದಿನೇ ವಿಭೂತಿ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದಕ್ಕೆ ತಕ್ಕಂತೆ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಸುಸಜ್ಜಿತ ಶೌಚಾಲಯ, ಕುಡಿಯುವ ನೀರು ಹಾಗೂ ಸಮರ್ಪಕ ಸ್ವಚ್ಛತಾ ವ್ಯವಸ್ಥೆ ಇಲ್ಲದೆ ಮಹಿಳೆಯರು ಹಾಗೂ ಮಕ್ಕಳು ತೀವ್ರ ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ತಾಣದ ನೈರ್ಮಲ್ಯ ಸಂಪೂರ್ಣವಾಗಿ ಹದಗೆಡುವ ಅಪಾಯವಿದೆ.
ಲಕ್ಷಾಂತರ ರೂ. ಆದಾಯ, ಅಭಿವೃದ್ಧಿ ಶೂನ್ಯ!ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ನಿಷೇಧ ದಲ್ಲಿ ಉತ್ತಮವಾದ ಕೆಲಸಗಳಾಗುತ್ತಿದೆ.
ಮಾಹಿತಿಗಳ ಪ್ರಕಾರ ವರ್ಷಕ್ಕೆ ಸುಮಾರು ಒಂದುವರೆ ಲಕ್ಷ ಜನ ಭೇಟಿಕೊಡುತ್ತಾರಂತೆ 4 ಚಕ್ರದ ವಾಹನಗಳಿಗೆ ರೂ.40 ರೂ ಬೈಕ್ ಗೆ ರೂ.20 ಜನರಿಗೆ 10 ರೂಪಾಯಿಯಂತೆ ವಿಲೇಜ್ ಫಾರೆಸ್ಟ್ ಕಮಿಟಿ (VFC) ವತಿಯಿಂದ ಪ್ರವಾಸಿಗರು ಹಾಗೂ ವಾಹನಗಳಿಂದ ಶುಲ್ಕ ಸಂಗ್ರಹಿಸಲಾಗುತ್ತಿದೆ. ಮೂಲಗಳ ಪ್ರಕಾರ, 2022ರಿಂದ ಈ ರೀತಿ ಹಣ ಸಂಗ್ರಹಿಸಲಾಗುತ್ತಿದ್ದು, ಈಗಾಗಲೇ ಲಕ್ಷಾಂತರ ರೂಪಾಯಿ ಖಾತೆಯಲ್ಲಿ ಜಮೆಯಾಗಿದೆ. ಆದರೆ, “ಸಂಗ್ರಹವಾದ ಈ ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿಲ್ಲವೇಕೆ?” ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಹಣ ಸಂಗ್ರಹವಾಗುತ್ತಿದ್ದರೂ ರಸ್ತೆ ದುರಸ್ತಿ, ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಸಂಗ್ರಹವಾಗಿರುವ ಒಟ್ಟು ಮೊತ್ತ, ಖರ್ಚಿನ ವಿವರ ಹಾಗೂ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶ್ವೇತಪತ್ರ ಹೊರಡಿಸಿ, ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಇಚ್ಛಾಶಕ್ತಿ ಅಗತ್ಯ: ಪ್ರವಾಸೋದ್ಯಮದ ಬೆಳವಣಿಗೆಗೆ ಕೇವಲ ಪ್ರಕೃತಿ ಸೌಂದರ್ಯವೊಂದೇ ಸಾಲದು, ಉತ್ತಮ ರಸ್ತೆ, ಸ್ವಚ್ಛತೆ ಮತ್ತು ಸುರಕ್ಷತೆ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. ತುರ್ತಾಗಿ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿದರೆ ವಿಭೂತಿ ಜಲಪಾತವು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ.
ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ, ಜಿಲ್ಲೆಯ ಪ್ರವಾಸೋದ್ಯಮಕ್ಕೂ ಆರ್ಥಿಕ ಬಲ ಸಿಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸಮಗ್ರ ಅಭಿವೃದ್ಧಿಗೆ ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.


