ಕುಮಟಾ/ ಮಿರ್ಜಾನ್: ತಾವು ಕಲಿತ ಮಾತೃಶಾಲೆಯ ಬಗ್ಗೆ ಹೆಮ್ಮೆ ಹಾಗೂ ಅಭಿಮಾನವನ್ನು ಉಳಿಸಿಕೊಂಡಿರುವ ಹಿರಿಯ ವಿದ್ಯಾರ್ಥಿಗಳು, ಮಿರ್ಜಾನ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಮಾದರಿಯಾಗಿದ್ದಾರೆ.
ಪ್ರಸ್ತುತ ಮಿರ್ಜಾನ ಗ್ರಾಮದಲ್ಲಿ ವಾಸ್ತವ್ಯವಿರುವ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿರುವ ಈ ಶಾಲೆಯ ಹಳೆ ವಿದ್ಯಾರ್ಥಿಗಳು, ತಮ್ಮ ಏಳಿಗೆಗೆ ಕಾರಣವಾದ ಶಾಲೆಯ ಬಗ್ಗೆ ಅಪಾರ ಕೃತಜ್ಞತೆ ಹೊಂದಿದ್ದಾರೆ.

ಸಮಾಜದಲ್ಲಿ ಹಾಗೂ ತಮ್ಮ ಉದ್ಯೋಗ ಸ್ಥಳದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಇವರು, ಶಾಲೆಯ ಪ್ರಗತಿ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಹಿಂದೆ ತಾವು ನೀಡಿದ್ದ ಭರವಸೆಯಂತೆ ನಡೆದುಕೊಂಡಿದ್ದಾರೆ. ಬರೋಬ್ಬರಿ ರೂ. 65000/- ಗಳ ಸ್ವಂತ ಮೊತ್ತವನ್ನು ವ್ಯಯಿಸಿ ಶಾಲಾ ಆವರಣಕ್ಕೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕೊಟ್ಟಿದ್ದಾರೆ.
ಬೆಳೆದು ಉನ್ನತ ಹುದ್ದೆಗೇರಿದ ಮೇಲೂ ಅಕ್ಷರ ಕಲಿಸಿದ ಶಾಲೆಯನ್ನು ಮರೆಯದೆ, ಅದರ ಒಳಿತಿಗಾಗಿ ಈ ರೀತಿಯ ಸಮಾಜಮುಖಿ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ. ಈ ಸಿಸಿಟಿವಿ ಅಳವಡಿಕೆಯಿಂದ ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಭದ್ರತೆ ದೊರೆಯಲಿದ್ದು, ಶಾಲಾ ಆವರಣದ ನಿರ್ವಹಣೆಯೂ ಸುಗಮವಾಗಲಿದೆ.
ಕೊಟ್ಟ ಮಾತಿನಂತೆ ನಡೆದುಕೊಂಡು ಶಾಲೆಯ ಬಗ್ಗೆ ತಾವು ಹೊಂದಿರುವ ಕಾಳಜಿಯನ್ನು ಪ್ರದರ್ಶಿಸಿದ ಸಾರಿಗೆ ಸಂಸ್ಥೆಯ ಈ ಉದ್ಯೋಗಿಗಳ ಸತ್ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಮಿರ್ಜಾನ ಗ್ರಾಮದ ನಾಗರಿಕರು ತುಂಬು ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


