ಕುಮಟಾ: ತಾಲೂಕಿನಾದ್ಯಂತ ಕೆಲವೆಡೆ ಎಗ್ಗಿಲ್ಲದೆ ನಡೆಯುತ್ತಿದ್ದ ಓಸಿ, ಮಟ್ಕಾ ಹಾಗೂ ಅಕ್ರಮ ಮರಳು ದಂಧೆಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಕುಮಟಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿರುವ ಕೆ. ಕುಸುಮಾಧರ್ ಅವರ ಖಡಕ್ ಕಾರ್ಯಾಚರಣೆಯಿಂದಾಗಿ ತಾಲೂಕಿನ ದಂಧೆಕೋರರು ಬೆಚ್ಚಿಬಿದ್ದಿದ್ದಾರೆ.
ಕುಮಟಾ ಠಾಣೆಗೆ ಬಂದ ಕೆಲವೇ ದಿನಗಳಲ್ಲಿ ಇನ್ಸ್‌ಪೆಕ್ಟರ್ ಕುಸುಮಾಧರ್, ಕೇವಲ ಕುರ್ಚಿಗಷ್ಟೇ ಸೀಮಿತವಾಗದೆ ನೇರವಾಗಿ ಫೀಲ್ಡ್‌ಗಿಳಿದು ಕೆಲಸ ಮಾಡುತ್ತಿದ್ದಾರೆ. ಬಹುಕಾಲದಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಅಂದರ್-ಬಾಹರ್, ಜೂಜಾಟ ಹಾಗೂ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟದ ಮೇಲೆ ಇದೀಗ ಖಾಕಿ ಹದ್ದಿನ ಕಣ್ಣಿಟ್ಟಿದೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ದಂಧೆಕೋರರಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ.ಸಮಸ್ಯೆ ಇರುವ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡುತ್ತಿರುವ ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಠಾಣೆಗೆ ಬಂದ ಕೆಲವೇ ದಿನಗಳಲ್ಲಿ ತಮ್ಮ ಚುರುಕಿನ ಕಾರ್ಯಾಚರಣೆಯ ಮೂಲಕ ಜನರ ವಿಶ್ವಾಸ ಗಳಿಸಿರುವ ಇನ್ಸ್‌ಪೆಕ್ಟರ್ ಅವರ ಈ ‘ಖಡಕ್ ನಡೆ’ ಮುಂದಿನ ದಿನಗಳಲ್ಲೂ ಇದೇ ರೀತಿ ನಿರಂತರವಾಗಿ ಮುಂದುವರಿಯಲಿ, ಆ ಮೂಲಕ ಕುಮಟಾದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.


