ಮಂಕಿ ಕಬಡ್ಡಿ ಪಂದ್ಯಾವಳಿ: ಅಂಕೋಲಾದ ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಥಮ ಸ್ಥಾನ..

News Desk
2 Min Read

ಅಂಕೋಲಾ: ಹೊನ್ನಾವರ ತಾಲೂಕಿನ ಮಂಕಿಯ ಗುಳದಕೇರಿಯಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಅಂಕೋಲಾದ ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಪಂದ್ಯಾವಳಿಯ ಫೈನಲ್‌ನಲ್ಲಿ ಹೊನ್ನಾವರದ ಸೆವೆನ್ ಸ್ಟಾರ್ ತಂಡದ ವಿರುದ್ಧ ಜಯಗಳಿಸಿ ಈ ಸಾಧನೆ ಮಾಡಿದೆ. ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ನ ಲವೇಶ ಗೌಡ ಬೊಬ್ರವಾಡ ಅವರು ಪಂದ್ಯಾವಳಿಯ ‘ಉತ್ತಮ ದಾಳಿಗಾರ’ ಪ್ರಶಸ್ತಿಗೆ ಭಾಜನರಾದರು. ತಂಡದ ಸದಸ್ಯರಾದ ಸಂಪ್ರೀತ ನಾಯಕ, ಎಜೆ ಕಾರ್ತಿಕ, ಮಯೂರ ನಾಯ್ಕ, ಗಣೇಶ ಗೌಡ, ಅಮೀತ ಗೌಡ, ಬಾಲು ನಾಯ್ಕ, ಕೃಷ್ಣ ನಾಯ್ಕ, ಸದಾ ಗೌಡ, ಸಂದೀಪ ಹಾಗೂ ರಾಘ ನಾಯಕ ಅವರ ಸಾಂಘಿಕ ಆಟವು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಈ ಸಂಭ್ರಮದ ಸಂದರ್ಭದಲ್ಲಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷರಾದ ಗಜು ಆರ್ ನಾಯ್ಕ ಬೊಬ್ರವಾಡ ಅವರು ವಿಜೇತ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರಾದ ಮೂರ್ತಿ ಆರ್ ನಾಯ್ಕ ಬೊಬ್ರವಾಡ ಅವರನ್ನು ಅಭಿನಂದಿಸಿದ್ದಾರೆ.

ಕ್ರೀಡಾ ಅಧಿಕಾರಿಗಳ ಬೆಂಬಲಕ್ಕೆ ಶ್ರೀರಾಮ ಸ್ಪೋರ್ಟ್ಸ್ ಕ್ಲಬ್ ಅಭಿನಂದನೆ:

ಕ್ರೀಡಾ ಕ್ಷೇತ್ರದಲ್ಲಿ ಸ್ಥಳೀಯ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಾದರೆ ಕೇವಲ ಆಟಗಾರರ ಪರಿಶ್ರಮವಷ್ಟೇ ಸಾಲದು, ಅದರ ಹಿಂದೆ ಅಧಿಕಾರಿಗಳ ಪ್ರೋತ್ಸಾಹವೂ ಅತಿ ಮುಖ್ಯ. ಈ ನಿಟ್ಟಿನಲ್ಲಿ ಅಂಕೋಲಾದ ಕ್ರೀಡಾಪಟುಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ಅಧಿಕಾರಿಗಳಿಗೆ ಶ್ರೀರಾಮ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿಶೇಷ ಕೃತಜ್ಞತೆ ಸಲ್ಲಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿ ವೈ. ನಾಯಕ, ಅಂಕೋಲಾ ತಾಲೂಕು ಕ್ರೀಡಾ ಅಧಿಕಾರಿ ವೆಂಕಟೇಶ ನಾಯಕ ಹಾಗೂ ಕ್ರೀಡಾಂಗಣದ ನಿರ್ವಾಹಕರಾದ ದೀಲಿಪ್ ನಾಯಕ ಅವರು ಕ್ರೀಡಾಪಟುಗಳ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಅಂಕೋಲಾ ತಾಲೂಕು ಕ್ರೀಡಾಂಗಣಕ್ಕೆ ಬಂದಂತಹ ಹೊಸ ಮ್ಯಾಟ್‌ನಲ್ಲಿ ನಮ್ಮ ಕ್ಲಬ್‌ನ ಆಟಗಾರರು ತರಬೇತಿ ಪಡೆಯಲು ಇಲಾಖೆಯ ನಿಯಮದಂತೆ ಅವಕಾಶ ಕಲ್ಪಿಸಿಕೊಡುವ ಮೂಲಕ ತಂಡದ ಪ್ರಗತಿಗೆ ಈ ಅಧಿಕಾರಿಗಳು ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ.

ಸಂಸ್ಥಾಪಕ ಅಧ್ಯಕ್ಷರ ನುಡಿ: “ಒಂದು ತಾಲೂಕಿನಲ್ಲಿ ಕ್ರೀಡೆ ಬೆಳೆಯಬೇಕೆಂದರೆ ಮತ್ತು ಉತ್ತಮ ತಂಡಗಳು ಸಿದ್ಧವಾಗಬೇಕೆಂದರೆ ಇಂತಹ ಜನಪರ ಹಾಗೂ ಕ್ರೀಡಾ ಪ್ರೇಮಿ ಅಧಿಕಾರಿಗಳ ಅವಶ್ಯಕತೆ ತುಂಬಾ ಇದೆ. ಕ್ರೀಡಾಪಟುಗಳ ಕಷ್ಟಕ್ಕೆ ಸ್ಪಂದಿಸಿ, ಸೂಕ್ತ ಸೌಲಭ್ಯ ಒದಗಿಸಿಕೊಡುತ್ತಿರುವ ಈ ಎಲ್ಲಾ ಅಧಿಕಾರಿಗಳಿಗೆ ನಮ್ಮ ಕ್ಲಬ್ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷರಾದ ಗಜು ಆರ್. ನಾಯ್ಕ ತಿಳಿಸಿದ್ದಾರೆ.

…………………………..

Share This Article
Leave a Comment