ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಆರೋಪಿಗಳ ಶೀಘ್ರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಿರಿಯ ವಕೀಲರಾದ ‘ಉಮೇಶ ನಾಯ್ಕ’ ಆಗ್ರಹ..

News Desk
1 Min Read

ಕಾರವಾರ/ಅಂಕೋಲಾ: ಕಾರವಾರ ಜಿಲ್ಲಾ ನ್ಯಾಯಾಲಯ ಸೇರಿದಂತೆ ಕರಾವಳಿ ಭಾಗದ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬರುತ್ತಿರುವ ಘಟನೆಗಳು ತೀವ್ರ ಖಂಡನೀಯವಾಗಿದ್ದು, ಈ ದುಷ್ಕೃತ್ಯವೆಸಗಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಭಯದ ವಾತಾವರಣ ಸೃಷ್ಟಿಸುತ್ತಿರುವವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಂಕೋಲಾದ ಹಿರಿಯ ವಕೀಲರಾದ ಉಮೇಶ ನಾಯ್ಕ ಅವರಿಂದ ಆಗ್ರಹ ವ್ಯಕ್ತವಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ನ್ಯಾಯಾಲಯಗಳು ನಮ್ಮ ಪಾಲಿಗೆ ದೇವಸ್ಥಾನವಿದ್ದಂತೆ. ಇಂತಹ ಪವಿತ್ರ ಸ್ಥಳಕ್ಕೆ ಬೆದರಿಕೆ ಒಡ್ಡುವುದರಿಂದ ನ್ಯಾಯಾಲಯದ ದೈನಂದಿನ ಕಾರ್ಯಕಲಾಪಗಳನ್ನು ನಿರ್ವಹಿಸಲು ತೀವ್ರ ಅಡಚಣೆಯಾಗುವುದಲ್ಲದೇ, ಆತಂಕದ ವಾತಾವರಣ ನಿರ್ಮಾಣವಾಗುತ್ತದೆ,” ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ 22-06-2026 ರಂದು ಉಡುಪಿ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು, ಇದೀಗ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೂ ಅದೇ ರೀತಿಯ ಬೆದರಿಕೆ ಸಂದೇಶ ರವಾನಿಸಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಇ-ಮೇಲ್ ಕಳುಹಿಸಿದ ವ್ಯಕ್ತಿಯ ಗುರುತು ಹಾಗೂ ಸಂದೇಶದ ಮೂಲವನ್ನು ಪತ್ತೆ ಹಚ್ಚಬೇಕು. ಈ ಕೃತ್ಯದ ಹಿಂದೆ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳಿದ್ದರೂ ಅವರನ್ನು ಹೆಡೆಮುರಿ ಕಟ್ಟಬೇಕು ಎಂದು ಒತ್ತಾಯಿಸಿದ್ದಾರೆ.

“ಒಂದು ವೇಳೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಮೂಲವನ್ನು ಪತ್ತೆ ಹಚ್ಚದಿದ್ದರೆ ಪುಂಡರ ಅಟ್ಟಹಾಸ ಮತ್ತಷ್ಟು ಹೆಚ್ಚಾಗುತ್ತದೆ. ಇದು ಹೀಗೆಯೇ ಮುಂದುವರೆದರೆ ನ್ಯಾಯಾಲಯದಲ್ಲಿ ನಿರ್ಭೀತಿಯಿಂದ ಕಲಾಪಗಳನ್ನು ನಡೆಸಲು ಹೇಗೆ ಸಾಧ್ಯ? ಆದ್ದರಿಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ತಕ್ಷಣವೇ ಸೈಬರ್ ತಂತ್ರಜ್ಞಾನವನ್ನು ಬಳಸಿಕೊಂಡು ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಉಮೇಶ ನಾಯ್ಕ ಅವರಿಂದ ಆಗ್ರಹ ಕೇಳಿಬಂದಿದೆ.

Share This Article
Leave a Comment