ಅಂಕೋಲಾ: ತಾಲೂಕಿನ ಕುಂಟಕಣಿ ಗ್ರಾಮದ ಅಸಳ್ಳಿ ಮೂಲದ 18 ವರ್ಷದ ಯುವತಿ ಯೋರ್ವಳು ತಾಯಿಗೆ ಔಷಧಿ ತರಲು ಶಿರಸಿಗೆ ಹೋದವಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. ನಾಪತ್ತೆಯಾದ ಯುವತಿಯನ್ನು ಶ್ರೀದೇವಿ ಈಶ್ವರ ಗೌಡ ಎಂದು ಗುರುತಿಸಲಾಗಿದ್ದು, ಈಕೆ ಜೂನ್ 24 ರಂದು ಬೆಳಿಗ್ಗೆ 8:00 ಗಂಟೆಗೆ ಮನೆಯಿಂದ ಹೊರಟವಳು ಇಂದಿನವರೆಗೂ ಮರಳಿ ಬಂದಿಲ್ಲ. ಈ ಕುರಿತು ಯುವತಿಯ ಸಹೋದರ ಪರಮೇಶ್ವರ ಈಶ್ವರ ಗೌಡ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 125/2026 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕಣ್ಮರೆಯಾಗಿರುವ ಶ್ರೀದೇವಿ ಜೂನ್ 24 ರಂದು ತನ್ನ ತಾಯಿಗೆ ನಿಯಮಿತವಾಗಿ ಬೇಕಾಗುವ ಮಾತ್ರೆಗಳನ್ನು ತರಲೆಂದು ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದಳು. ಆದರೆ ಸಂಜೆಯಾದರೂ ಆಕೆ ಮನೆಗೆ ಹಿಂತಿರುಗದ ಕಾರಣ ಆತಂಕಗೊಂಡ ಕುಟುಂಬಸ್ಥರು ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದಾಗ್ಯೂ ಆಕೆಯ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ನಾಪತ್ತೆಯಾದ ಯುವತಿಯು ಸುಮಾರು 5 ಅಡಿ 3 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು ಹಾಗೂ ಕಪ್ಪು ಕೂದಲನ್ನು ಹೊಂದಿದ್ದಾಳೆ. ಕಣ್ಮರೆಯಾಗುವ ಸಂದರ್ಭದಲ್ಲಿ ಆಕೆ ಹೂವಿನ ಡಿಸೈನ್ ಇರುವ ಬಿಳಿ ಬಣ್ಣದ ಚೂಡಿದಾರ್ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ವೇಲ್ ಹಾಗೂ ಕಪ್ಪು ಮಣಿಸರ ಧರಿಸಿದ್ದಳು ಮತ್ತು ಆಕೆಗೆ ಕನ್ನಡ ಭಾಷೆ ಮಾತನಾಡಲು ಬರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಈ ಚಹರೆಯುಳ್ಳ ಯುವತಿಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ (08388) 220333 ಅಥವಾ ಮೊಬೈಲ್ ಸಂಖ್ಯೆಗಳಾದ 9480805250, 9480805268 ಗೆ ಸಂಪರ್ಕಿಸಲು ತಿಳಿಸಲಾಗಿದೆ.


