ಅಂಕೋಲಾ ತಾಲೂಕಿನ ಶೇಡಗೇರಿ ಗ್ರಾಮದ ಸರ್ವೇ ನಂಬರ್ 80 ಬ ದಕ್ಷೇತ್ರ 0-1-06 ರಲ್ಲಿರುವ ಸರಕಾರಿ ರಸ್ತೆ ಹಾಗೂ ಕೋಟೆವಾಡ ಮಾರುತಿ ದೇವಸ್ಥಾನದ ಕಾರ್ಯಕ್ರಮಗಳ ವಾಹನ ನಿಲುಗಡೆಗೆ ಮೀಸಲಿಟ್ಟಿದ್ದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗೆ ಅಕ್ಟೋಬರ್ 28, 2026 ರಂದು ಲಿಖಿತ ದೂರು ನೀಡಲಾಗಿದೆ.

ಕೋಟೆವಾಡದ ನಿವಾಸಿ ಸಾಮಾಜಿಕ ಹೋರಾಟಗಾರ ಸಂಜೀವ ನಾಯ್ಕ ಎಂಬುವವರು ಈ ದೂರು ಸಲ್ಲಿಸಿದ್ದು, ಸಾರ್ವಜನಿಕ ಬಳಕೆಯ ಜಾಗವನ್ನು ರಕ್ಷಿಸುವಂತೆ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಮಾನ್ಯ ತಹಶೀಲ್ದಾರರಿಗೂ ಜಿಲ್ಲಾಧಿಕಾರಿಗಳ ಆದೇಶವನ್ನು ಪರಿಶೀಲಿಸುವಂತೆ ಮನವಿ ಸಲ್ಲಿಸಿದರು..
ಈ ವಿವಾದಿತ ಸ್ಥಳದಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಂಕೋಲಾ ತಹಶೀಲ್ದಾರರಿಗೆ ಹಾಗೂ ಕುಮಟಾ ಸಹಾಯಕ ಆಯುಕ್ತರು ಅಂಕೋಲಾ ಪುರಸಭೆಯ ಹಿಂದಿನ ಮುಖ್ಯಾಧಿಕಾರಿಗಳಿಗೆ ಈ ಹಿಂದೆಯೇ ನಿರ್ದೇಶನ ನೀಡಿದ್ದರು. ಆದರೂ ಸಂಬಂಧಪಟ್ಟ ಅಧಿಕಾರಿಗಳು ನಿಯಮದ ಪ್ರಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ದೂರಿನಲ್ಲಿದೆ.

ಇದೇ ಆಡಳಿತಾತ್ಮಕ ನಿರ್ಲಕ್ಷ್ಯದ ಲಾಭ ಪಡೆದು, ಪ್ರಸ್ತುತ ‘ಹೂವಾ ಕಂಡೇಕರ’ ಎಂಬುವವರು ಈ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸಾರ್ವಜನಿಕ ರಸ್ತೆ ಮೀಸಲು ಭೂಮಿಯಲ್ಲಿ ನಡೆಯುತ್ತಿರುವ ಈ ಅನಧಿಕೃತ ಕಾಂಪೌಂಡ್ ಕಾಮಗಾರಿಯನ್ನು ತಕ್ಷಣವೇ ತೆರವುಗೊಳಿಸಬೇಕು. ಎಂದು ದೂರುದಾರರು ಪುರಸಭೆಯನ್ನು ವಿನಂತಿಸಿದ್ದಾರೆ. ತಮ್ಮ ದೂರಿನ ಗಾಂಭೀರ್ಯತೆಯನ್ನು ಪುಷ್ಟೀಕರಿಸಲು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಸುಪ್ರೀಂ ಕೋರ್ಟ್ ಆದೇಶದ ಪ್ರತಿಗಳನ್ನು ಸಹ ಅರ್ಜಿಯೊಂದಿಗೆ ನೀಡಿದ್ದಾರೆ.


