ಅಂಕೋಲಾ: ಸಾರ್ವಜನಿಕರ ಜೀವ ರಕ್ಷಣೆಗಾಗಿ ‘ವಿಕಾಸ ವಾಹಿನಿ’ ಮಾಡಿದ ಎಚ್ಚರಿಕೆಯ ವರದಿಗೆ ಪ್ರತಿಫಲ ಸಿಕ್ಕಿದೆ. ಅಂಕೋಲಾ ತಾಲೂಕಿನ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ರಸ್ತೆ ಡಿವೈಡರ್ ದಾಟುತ್ತಿದ್ದ ಅಪಾಯಕಾರಿ ಜಾಗಗಳಿಗೆ ಇದೀಗ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಹಾಗೂ ಅಧಿಕಾರಿಗಳು ಕಾಂಕ್ರೀಟ್ ಹಾಕಿ ಶಾಶ್ವತವಾಗಿ ಮುಚ್ಚಿದ್ದಾರೆ. ಇದರೊಂದಿಗೆ ಹೆದ್ದಾರಿಯಲ್ಲಿ ಸಂಭವಿಸಬಹುದಿದ್ದ ಎಷ್ಟೋ ಭೀಕರ ಅಪಘಾತಗಳಿಗೆ ಬ್ರೇಕ್ ಬಿದ್ದಂತಾಗಿದೆ.
ಹೆದ್ದಾರಿಯಲ್ಲಿ ಯು-ಟರ್ನ್ ತೆಗೆದುಕೊಳ್ಳುವ ಬದಲು, ಕೇವಲ ಸಮಯ ಉಳಿಸುವ ಭರದಲ್ಲಿ ಸವಾರರು ಡಿವೈಡರ್ ನಡುವಿನ ಅನಧಿಕೃತ ಅಂತರಗಳಲ್ಲಿ ವಾಹನಗಳನ್ನು ನುಗ್ಗಿಸುತ್ತಿದ್ದರು. ಇದರಿಂದ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬರುತ್ತಿದ್ದ ಇತರ ವಾಹನ ಚಾಲಕರಿಗೆ ದಿಢೀರ್ ಆತಂಕ ಸೃಷ್ಟಿಯಾಗಿ, ಜೀವಕ್ಕೆ ಕುತ್ತು ಬರುವ ವಾತಾವರಣ ನಿರ್ಮಾಣವಾಗಿತ್ತು. ಈ ಗಂಭೀರ ಸಮಸ್ಯೆಯ ಕುರಿತು ‘ವಿಕಾಸ ವಾಹಿನಿ’ಯು ಎಚ್ಚರಿಕೆಯ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅಲ್ಲದೆ, ‘ಇದು ಪ್ರತಿಯೊಂದು ಜೀವದ ಉಳಿವಿನ ಪ್ರಶ್ನೆ’ ಎಂಬುದನ್ನು ಉಲ್ಲೇಖಿಸಿ, ಗಮನ ಸೆಳೆದಿತ್ತು.

ಪತ್ರಿಕೆಯ ವರದಿಯ ಹಾಗೂ ಜಾಗದ ವಾಸ್ತವತೆಯ ತೀವ್ರತೆಯನ್ನು ಅರಿತ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತ ರಾಗಿದ್ದಾರೆ. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ ಪ್ರಾಧಿಕಾರ ಹಾಗೂ ಇಲಾಖೆಯ ಅಧಿಕಾರಿಗಳ ತಂಡ, ದ್ವಿಚಕ್ರ ವಾಹನಗಳು ನುಗ್ಗಲು ಅವಕಾಶವಿದ್ದ ಡಿವೈಡರ್ ನಡುವಿನ ಎಲ್ಲ ಅನಧಿಕೃತ ಜಾಗಗಳನ್ನು ಕಾಂಕ್ರೀಟ್ ಸುರಿದು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಇದರಿಂದಾಗಿ ಇನ್ನುಮುಂದೆ ಸವಾರರು ಕಡ್ಡಾಯವಾಗಿ ಹೆದ್ದಾರಿ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿ ನಿಗದಿತ ಯು-ಟರ್ನ್ ಮೂಲಕವೇ ಸಂಚರಿಸುವುದು ಅನಿವಾರ್ಯವಾಗಿದೆ.
ಸಾರ್ವಜನಿಕ ಹಿತಾಸಕ್ತಿ ಹಾಗೂ ಅಮೂಲ್ಯ ಜೀವಗಳ ಮೌಲ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ‘ವಿಕಾಸ ವಾಹಿನಿ’ ಪ್ರಕಟಿಸಿದ ವರದಿಗೆ ತಕ್ಷಣವೇ ಸ್ಪಂದಿಸಿ, ತ್ವರಿತ ಕ್ರಮ ಕೈಗೊಂಡ ಸಂಬಂಧಪಟ್ಟ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಮಾಜದಲ್ಲಿ ಬದಲಾವಣೆ ತರುವ ಹಾಗೂ ಜನರ ಪ್ರಾಣ ರಕ್ಷಿಸುವ ‘ವಿಕಾಸ ವಾಹಿನಿ’ಯ ವರದಿಯ ಬಗ್ಗೆ ವ್ಯಾಪಕ ಪ್ರಶಂಸೆ ಕೇಳಿ ಬರುತ್ತಿದೆ


