ಉತ್ತರ ಕನ್ನಡ: ಮೇ 17-18ರಂದು ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಜಿಲ್ಲಾಡಳಿತದಿಂದ ‘ಹೈ ಅಲರ್ಟ್’ ಘೋಷಣೆ

News Desk
1 Min Read

ಉತ್ತರ ಕನ್ನಡ : ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೇ 17 ಮತ್ತು 18 ರಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಮುಂದಿನ ಎರಡು ದಿನಗಳ ಕಾಲ ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರಲಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇದರೊಂದಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರು ನದಿ, ಸಮುದ್ರ ಸೇರಿದಂತೆ ಯಾವುದೇ ಜಲಮೂಲಗಳ ಬಳಿ ತೆರಳದಂತೆ ಹಾಗೂ ಮಕ್ಕಳು ಸಮುದ್ರ ತೀರಕ್ಕೆ ಹೋಗದಂತೆ ಪೋಷಕರು ಜಾಗ್ರತೆ ವಹಿಸಲು ಆದೇಶಿಸಲಾಗಿದೆ.

ಮಳೆಯ ಸಂದರ್ಭದಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ, ಅಪಾಯಕಾರಿ ಮನೆಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಅಗತ್ಯ ಬಿದ್ದರೆ ತಕ್ಷಣವೇ ಕಾಳಜಿ ಕೇಂದ್ರಗಳನ್ನು ತೆರೆಯಲು ಸುಸಜ್ಜಿತವಾಗಿರಬೇಕೆಂದು ಅಪರ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಯಾವುದೇ ತುರ್ತು ಪರಿಸ್ಥಿತಿ ಅಥವಾ ನೆರವಿಗಾಗಿ ಸಾರ್ವಜನಿಕರು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ಸಂಖ್ಯೆ: 08382-229857 ಅಥವಾ ವಾಟ್ಸಾಪ್ ಸಂಖ್ಯೆ: 9483511015 ಅನ್ನು ಸಂಪರ್ಕಿಸ ಬಹುದಾಗಿದೆ.

Share This Article
Leave a Comment