ಅಂಕೋಲಾ: ತಹಶೀಲ್ದಾರ್ ಕಛೇರಿಯಲ್ಲಿ ವಿಕಲಚೇತನರ ಓಡಾಟಕ್ಕೆ ನಿರ್ಮಿಸಲಾದ ಮಾರ್ಗವು ಗಿಡಗಂಟಿಗಳಿಂದ ಆವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿರುವ ಕುರಿತು ಹಿರಿಯ ವಕೀಲರಾದ ಉಮೇಶ ಎನ್. ನಾಯ್ಕ ಅವರು ಇತ್ತೀಚೆಗಷ್ಟೇ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿಕಾಸವಾಹಿನಿ ಯಲ್ಲಿ ವರದಿಯು ಪ್ರಸಾರವಾಗಿತ್ತು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು.
ಈ ವರದಿಗೆ ಆಡಳಿತ ಯಂತ್ರವು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಕಲಚೇತನರ ಮಾರ್ಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಮೂಲಕ ಜನಪರ ಕಾಳಜಿ ತೋರಿದೆ. ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದರೂ, ನಿರ್ವಹಣೆಯ ಕೊರತೆಯಿಂದಾಗಿ ವ್ಹೀಲ್ ಚೇರ್ ಓಡಾಟಕ್ಕೆ ಅಸಾಧ್ಯವಾಗಿದ್ದ ಸಿಮೆಂಟ್ ರಸ್ತೆಯನ್ನು ಅಧಿಕಾರಿಗಳು ಸಮಸ್ಯೆಯ ಅರಿವಾದ ಕೂಡಲೇ ತೆರವುಗೊಳಿಸಿದ್ದಾರೆ. ಅಡ್ಡಿಯಾಗಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದ್ದು, ಇದೀಗ ವಿಕಲಚೇತನರು ಕಛೇರಿಯೊಳಗೆ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗಿದೆ.

ತಮ್ಮ ಆಗ್ರಹಕ್ಕೆ ಕ್ಷಿಪ್ರವಾಗಿ ಸ್ಪಂದಿಸಿ, ಯಾವುದೇ ಪ್ರತಿಭಟನೆ ಅಥವಾ ಹೋರಾಟಕ್ಕೆ ಆಸ್ಪದ ನೀಡದೆ ತಕ್ಷಣವೇ ಕಾರ್ಯಪ್ರವೃತ್ತರಾದ ಅಂಕೋಲಾ ತಹಶೀಲ್ದಾರ್ ಹಾಗೂ ಕಛೇರಿಯ ಸಿಬ್ಬಂದಿ ವರ್ಗದವರ ತ್ವರಿತ ಕಾರ್ಯವೈಖರಿಯನ್ನು ಹಿರಿಯ ವಕೀಲರಾದ ಉಮೇಶ ಎನ್. ನಾಯ್ಕ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
“ಸಮಸ್ಯೆಯನ್ನು ಬೆಟ್ಟು ಮಾಡಿದಾಗ ಅದನ್ನು ಸಕಾರಾತ್ಮಕವಾಗಿ ಹಾಗೂ ಗಂಭೀರವಾಗಿ ಪರಿಗಣಿಸಿ, ವಿಕಲಚೇತನರ ಹಿತದೃಷ್ಟಿಯಿಂದ ಕೂಡಲೇ ಮಾರ್ಗವನ್ನು ಸುಗಮಗೊಳಿಸಿದ ತಹಶೀಲ್ದಾರರ ನಡೆ ನಿಜಕ್ಕೂ ಶ್ಲಾಘನೀಯ. ಆಡಳಿತ ಯಂತ್ರ ಈ ರೀತಿಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದರೆ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತದೆ” ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯ ಮೂಲಕ ಹರ್ಷ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


