ಉತ್ತರ ಕನ್ನಡ: ರಾಜ್ಯದ ಗ್ರಾಮ ಪಂಚಾಯಿತಿಗಳು ಪ್ರಸ್ತುತ ತೀವ್ರ ಹಣಕಾಸಿನ, ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಕೂಡಲೇ ಎಚ್ಚೆತ್ತು ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಗಿರೀಶ್ ಎನ್. ನಾಯಕ ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿಗಳ ಪ್ರಮುಖ ಆರ್ಥಿಕ ಮೂಲವಾಗಿರುವ 2025–26 ಹಾಗೂ 2026–27ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ, ರಸ್ತೆ ದುರಸ್ತಿ, ಸ್ವಚ್ಛತೆ ಸೇರಿದಂತೆ ಬಹುತೇಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಾರ್ವಜನಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲಾಗದೆ ಗ್ರಾಮ ಪಂಚಾಯಿತಿಗಳು ಜನರ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಆಡಳಿತಾತ್ಮಕ ಕಾರ್ಯಗಳಿಗೆ ಬೆನ್ನೆಲುಬಾಗಿರುವ ‘ಇ-ಸ್ವತ್ತು’ ತಂತ್ರಾಂಶದಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ತಾಂತ್ರಿಕ ದೋಷಗಳು ಕಾಡುತ್ತಿವೆ. ಇದರಿಂದ ಆಸ್ತಿ ದಾಖಲೆಗಳ ನವೀಕರಣ, ಖಾತಾ ವರ್ಗಾವಣೆ ಹಾಗೂ ಪ್ರಮಾಣಪತ್ರಗಳ ವಿತರಣೆ ವಿಳಂಬವಾಗುತ್ತಿದ್ದು, ಗ್ರಾಮೀಣ ಜನತೆ ನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ. ಇದರ ಜೊತೆಗೆ, ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆಯೂ ಮಿತಿಮೀರಿದ್ದು, ಇರುವ ಅಲ್ಪಸ್ವಲ್ಪ ಸಿಬ್ಬಂದಿ ಮೇಲೆಯೇ ಅನೇಕ ವಿಭಾಗಗಳ ಜವಾಬ್ದಾರಿ ಬಿದ್ದಿದೆ. ಅತಿಯಾದ ಕೆಲಸದ ಒತ್ತಡದಿಂದಾಗಿ ಸಾರ್ವಜನಿಕ ಸೇವೆಗಳ ವಿತರಣೆ ಹಾಗೂ ಆಡಳಿತದ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ.
ಈ ಗಂಭೀರ ಸಮಸ್ಯೆಗಳ ಕುರಿತು ಈಗಾಗಲೇ ರಾಜ್ಯ ಸಂಘದ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ತಕ್ಷಣವೇ ಮಧ್ಯಪ್ರವೇಶಿಸಿ ಬಾಕಿ ಇರುವ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಿಡುಗಡೆ ಮಾಡಬೇಕು. ಇ-ಸ್ವತ್ತು ಸೇರಿದಂತೆ ಸಾರ್ವಜನಿಕ ಸೇವಾ ತಂತ್ರಾಂಶಗಳ ದೋಷ ನಿವಾರಿಸಲು ಜಿಲ್ಲಾಮಟ್ಟದಲ್ಲಿ ವಿಶೇಷ ತಾಂತ್ರಿಕ ತಂಡವನ್ನು ನಿಯೋಜಿಸಬೇಕು ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗ್ರಾಮೀಣ ಜನರ ಹಿತದೃಷ್ಟಿಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ತುರ್ತಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಒಂದು ವೇಳೆ ವಿಳಂಬ ಧೋರಣೆ ಅನುಸರಿಸಿದರೆ, ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಗಿರೀಶ್ ಎನ್. ನಾಯಕ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


