ಅಂಕೋಲಾ: ತಾಲೂಕಿನ ಹೊಸಕಂಬಿ ವಲಯದ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಬೆಲೆಬಾಳುವ ಕ್ಯಾಮೆರಾಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಕೋಲಾ ತಾಲೂಕಿನ ಹಿಲ್ಲೂರು ಸಮೀಪದ ಕೋಳಗಿ ನಿವಾಸಿ, ಕೂಲಿ ಕಾರ್ಮಿಕ ದುರ್ಗಾ ದೇವು ಹರಿಕಾಂತ್ರ (54) ಬಂಧಿತ ಆರೋಪಿ.
ಘಟನೆಯ ಹಿನ್ನೆಲೆ: ಅಖಿಲ ಭಾರತ ಹುಲಿ ಗಣತಿ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ, ಮೇ 1, 2026 ರಂದು ಹೊಸಕಂಬಿ ವಲಯದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ‘ಕಡಿಬ್ಯಾಕ್’ ಕಂಪನಿಯ ಆಫ್‌ಲೈನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಮೇ 12ರ ಮಧ್ಯಾಹ್ನದಿಂದ ಮೇ 13ರ ಬೆಳಗಿನ ಜಾವದ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಕ್ಯಾಮೆರಾಗಳನ್ನು ಕಳವು ಮಾಡಿದ್ದರು. ಈ ಕುರಿತು ಹಿಲ್ಲೂರು ಉಪ-ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ಅವರು ಮೇ 16ರಂದು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾರತೀಯ ನ್ಯಾಯ ಸಂಹಿತೆ (BNS)-2023 ಕಲಂ 303(2) ರಡಿ ಪ್ರಕರಣ (ಕ್ರೈಂ ನಂ: 90/2026) ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ವಿಶೇಷ ತಂಡದಿಂದ ಕಾರ್ಯಾಚರಣೆ: ಪ್ರಕರಣದ ಭೇದನೆಗಾಗಿ ಅಂಕೋಲಾ ಠಾಣೆಯಲ್ಲಿ ವಿಶೇಷ ತಂಡವೊಂದನ್ನು ನೇಮಿಸಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ತಂಡವು, ಆರೋಪಿ ದುರ್ಗಾ ಹರಿಕಾಂತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಆರೋಪಿಯು ಕ್ಯಾಮೆರಾ ಕದ್ದಿರುವುದನ್ನು ಒಪ್ಪಿಕೊಂಡಿದ್ದು, ಆತನಿಂದ ಅರಣ್ಯ ಇಲಾಖೆಗೆ ಸೇರಿದ ಕ್ಯಾಮೆರಾಗಳನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆ ತಂಡ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಹಾಗೂ ಕಾರವಾರ ಡಿವೈಎಸ್ಪಿ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ, ತನಿಖಾಧಿಕಾರಿಗಳಾದ ಪಿಎಸ್ಐ ವಿಶ್ವನಾಥ ನಿಂಗೊಳ್ಳಿ, ಪಿಎಸ್ಐ ಲಲಿತಾ ರಜಪೂತ ಮತ್ತು ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ, ಮಹಾದೇವ ಸಿದ್ದಿ, ಶೋಬಾ ನಾಯ್ಕ, ಭಗವಾನ್ ಗಾಂವಕರ, ಆಸಿಫ್ ಆರ್.ಕೆ., ಹಾಗೂ ಗಿರೀಶ್ ಲಮಾಣಿ ಅವರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪಾಲ್ಗೊಂಡಿದ್ದರು. ಪ್ರಕರಣವನ್ನು ತ್ವರಿತವಾಗಿ ಭೇದಿಸಿದ ಅಂಕೋಲಾ ಪೊಲೀಸರ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.


