ಅಂಕೋಲಾ ತಹಶೀಲ್ದಾರ್ ಕಛೇರಿಯು ಲಿಫ್ಟ್ ಸೌಲಭ್ಯವುಳ್ಳ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡವಾಗಿದ್ದರೂ, ಅಲ್ಲಿ ವಿಕಲಚೇತನರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಕಛೇರಿಯ ಸಿಬ್ಬಂದಿ ವರ್ಗದವರು ತಮ್ಮ ಓಡಾಟಕ್ಕೆ ಲಿಫ್ಟ್ ಬಳಸುತ್ತಿದ್ದರೂ, ವಿಕಲಚೇತನರ ವ್ಹೀಲ್ ಚೇರ್ ಓಡಾಟಕ್ಕೆ ಅನುಕೂಲವಾಗಬೇಕಿದ್ದ ಮಾರ್ಗವನ್ನು ಸೂಕ್ತವಾಗಿ ನಿರ್ವಹಣೆ ಮಾಡದಿರುವುದು ಆಡಳಿತ ಯಂತ್ರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅಂಕೋಲಾದ ಹಿರಿಯ ವಕೀಲರಾದ ಉಮೇಶ ಎನ್. ನಾಯ್ಕ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಕಲಚೇತನರ ಸುಗಮ ಪ್ರವೇಶಕ್ಕಾಗಿ ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಿಮೆಂಟ್ ರಸ್ತೆಯು ಗಿಡಗಂಟಿಗಳಿಂದ ಆವೃತವಾಗಿ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕಬ್ಬಿಣದ ಬಾಗಿಲು ತುಕ್ಕು ಹಿಡಿಯುತ್ತಿದ್ದು, ಸೌಕರ್ಯವಿದ್ದರೂ ಅದು ಸದ್ಬಳಕೆಯಾಗುತ್ತಿಲ್ಲ. ಇದರಿಂದಾಗಿ ವಿಕಲಚೇತನರು ಕಛೇರಿಯ ಹೊರಾಂಗಣದ ಮೆಟ್ಟಿಲುಗಳ ಬಳಿಯೇ ತಮ್ಮ ವ್ಹೀಲ್ ಚೇರ್‌ಗಳಲ್ಲಿ ಕಾಯುತ್ತಾ, ಹೊರಗಿನಿಂದಲೇ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದ ದುರದೃಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ಜೊತೆಗೆ ತಹಶೀಲ್ದಾರ್ ಕಛೇರಿಯ ಆವರಣದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದ ದುಸ್ಥಿತಿಯ ಬಗ್ಗೆಯೂ ಉಮೇಶ ನಾಯ್ಕ ಅವರು ಬೆಳಕು ಚೆಲ್ಲಿದ್ದಾರೆ. ಕಟ್ಟಡದ ಛಾವಣಿ ಸೋರುತ್ತಿದ್ದು, ಕಛೇರಿಯೊಳಗೆ ನೀರು ನಿಲ್ಲುತ್ತಿದೆ. ಪಹಣಿ ಪತ್ರಿಕೆ, ಆದಾಯ ಪ್ರಮಾಣಪತ್ರ, ಮತ್ತು ಆಧಾರ್ ಕಾರ್ಡ್ ಪಡೆಯಲು ಬರುವ ಸಾರ್ವಜನಿಕರು ಕತ್ತಲಲ್ಲಿಯೇ ನಿಂತು ಸೇವೆ ಪಡೆಯಬೇಕಾದ ಅನಿವಾರ್ಯತೆ ಇದೆ. ಕನಿಷ್ಠ ವಿದ್ಯುತ್ ಸಂಪರ್ಕದ ಸೌಕರ್ಯವನ್ನೂ ಒದಗಿಸದಿರುವುದು ಆಡಳಿತದ ಲೋಪವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣವೇ ಅಂಕೋಲಾ ತಹಶೀಲ್ದಾರ್ ಕಛೇರಿ ಹಾಗೂ ಅಟಲ್ ಜೀ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ವಿಕಲಚೇತನರ ಸಂಚಾರಕ್ಕೆ ಅಡ್ಡಿಯಾಗಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಸುಗಮ ಪ್ರವೇಶ ಕಲ್ಪಿಸಬೇಕು ಹಾಗೂ ಅಟಲ್ ಜೀ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ, ವಿಕಲಚೇತನರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಹಿರಿಯ ವಕೀಲ ಉಮೇಶ ನಾಯ್ಕ ಅವರು ಪತ್ರಿಕಾ ಹೇಳಿಕೆಯ ಮೂಲಕ ಎಚ್ಚರಿಸಿದ್ದಾರೆ.


