2012ರ ಭೀಕರ ರಸ್ತೆ ಅಪಘಾತ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೆ 14 ವರ್ಷಗಳಿಂದ ನಾಪತ್ತೆಯಾಗಿದ್ದ ಲಾರಿ ಚಾಲಕ ಅಂಕೋಲಾ ಪೊಲೀಸರ ಬಲೆಗೆ..!!

News Desk
2 Min Read

ಅಂಕೋಲಾ: 2012ರಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕನೋರ್ವನನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ತೋಟದಗಲ್ಲಿಯ ನಿವಾಸಿ ರಫೀಕ್ ಅಹ್ಮದ್ ಮೆಹಬೂಬ ಸುಬಾನಿ ಕಮಟಗಿ ಬಂಧಿತ ಆರೋಪಿ. ಈತನನ್ನು ಜುಲೈ 10, 2026ರಂದು ಅಂಕೋಲಾದ ಬಾಳೆಗುಳಿ ಬಳಿ ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಹಿನ್ನೆಲೆ: ದಿನಾಂಕ 28-11-2012ರಂದು ಆರೋಪಿ ರಫೀಕ್ ಅಹ್ಮದ್ ತನ್ನ ಲಾರಿಯನ್ನು (KA-25/B-59) ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದ. ಮಧ್ಯಾಹ್ನ ಸುಮಾರು 1:30ರ ಸುಮಾರಿಗೆ ಅಂಕೋಲಾ ತಾಲೂಕಿನ ಸುಂಕಸಾಳ ಬಳಿಯ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಲಾರಿಯ ನಿಯಂತ್ರಣ ಕಳೆದುಕೊಂಡು, ರಸ್ತೆಯ ತೀರಾ ಬಲಕ್ಕೆ ನುಗ್ಗಿ ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ವಾಹನಕ್ಕೆ (DL-3/CAJ-4170) ಮುಖಾಮುಖಿ ಡಿಕ್ಕಿ ಹೊಡೆದಿದ್ದ.

ಈ ಭೀಕರ ಅಪಘಾತದಲ್ಲಿ ಸ್ಕಾರ್ಪಿಯೋ ಚಾಲಕ, 73 ವರ್ಷದ ಲೋಫಾಸೂನ್ ಪ್ಸೋಟಿನ್ ಡಾರಗೋಳ್ ಮೃತಪಟ್ಟಿದ್ದರು. ವಾಹನದಲ್ಲಿದ್ದ ಪ್ರಯಾಣಿಕರಾದ 18 ವರ್ಷದ ಟೆನಜನ್ ಯೋನಟೆನ್ ಹಾಗೂ 70 ವರ್ಷದ ತೂಬಟೆನ್ ಟ್ಸೇರಿಂಗ್ ಎಂಬುವವರಿಗೆ ಗಾಯಗಳಾಗಿದ್ದವು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ (ಗು.ನಂ: 260/2012) ಐಪಿಸಿ ಸೆಕ್ಷನ್ 279, 337, 338 ಹಾಗೂ 304(A) ಅಡಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನೂ ಸಲ್ಲಿಸಲಾಗಿತ್ತು. ಆದರೆ, 2013ರಿಂದ ವಿಚಾರಣೆ ಎದುರಿಸದೆ, ತಾನು ನೀಡಿದ್ದ ವಿಳಾಸದಲ್ಲೂ ಇರದೆ ಆರೋಪಿ ನಾಪತ್ತೆಯಾಗಿದ್ದ.

ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

ದೀರ್ಘಕಾಲದಿಂದ ಬಾಕಿ ಉಳಿದಿದ್ದ ಈ ಪ್ರಕರಣದ ಆರೋಪಿಯ ಪತ್ತೆಗಾಗಿ ಅಂಕೋಲಾ ಪೊಲೀಸ್ ಠಾಣೆಯಿಂದ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು, ಆರೋಪಿ ರಫೀಕ್ ಅಹ್ಮದ್ ಹುಬ್ಬಳ್ಳಿಯಿಂದ ಕೇರಳದ ಕಡೆಗೆ ಲಾರಿ ಚಾಲಕನಾಗಿ ಹೋಗುತ್ತಿದ್ದಾನೆಂಬ ಸುಳಿವು ಪಡೆದರು. ಕಾರ್ಯಾಚರಣೆ ನಡೆಸಿದ ತಂಡ ದಿನಾಂಕ 10-07-2026ರಂದು ಅಂಕೋಲಾದ ಬಾಳೆಗುಳಿಯಲ್ಲಿ ಆತನನ್ನು ವಶಕ್ಕೆ ಪಡೆದಿದೆ. ಬಂಧಿತನನ್ನು ಅಂಕೋಲಾದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದೆ.

Share This Article