ಅಂಕೋಲಾ: ತಾಲೂಕಿನ ಅಗಸೂರ ಕೆ.ಪಿ.ಎಸ್. ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ತರುವಾಯ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕ-ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಒಗ್ಗೂಡಿ ನಾಡದೇವತೆಗೆ ದೀಪ ನಮನ ಹಾಗೂ ಪುಷ್ಪನಮನ ಸಲ್ಲಿಸುವ ಮೂಲಕ ನಾಡಹಬ್ಬಕ್ಕೆ ಭಕ್ತಿಪೂರ್ವಕ ಚಾಲನೆ ನೀಡಿದರು.
ರಾಜ್ಯೋತ್ಸವದ ಪ್ರಯುಕ್ತ ಶಾಲೆಯ ಎಲ್.ಕೆ.ಜಿ. ಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಸಾರುವ ವೈವಿಧ್ಯಮಯ ನೃತ್ಯ, ಹಾಡು ಮತ್ತು ರೂಪಕಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು.

ಕನ್ನಡ ಭಾಷೆ, ಪರಂಪರೆ ಮತ್ತು ನೆಲದ ಉಳಿವಿಗಾಗಿ ಶ್ರಮಿಸಿದ ನಾಡಿನ ಮಹಾನ್ ಚೇತನಗಳ ವೇಷಭೂಷಣಗಳನ್ನು ತೊಟ್ಟ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ನೆರೆದಿದ್ದವರ ಗಮನ ಸೆಳೆದದ್ದು ಆಚರಣೆಯ ವಿಶೇಷ ಆಕರ್ಷಣೆಯಾಗಿತ್ತು. ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವೆಂಕಟೇಶ್ ನಾಯಕ್ ಹಾಗೂ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನಾಡಹಬ್ಬದ ಶುಭಾಶಯಗಳನ್ನು ಕೋರಿದರು.
ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಗೋಪು ನಾಯಕ ಅಡ್ಲೂರ್ ಅವರು ವಿದ್ಯಾರ್ಥಿಗಳ ಅತ್ಯುತ್ತಮ ಸಾಂಸ್ಕೃತಿಕ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು. ಪ್ರೌಢ ವಿಭಾಗದ ಕನ್ನಡ ಸಹಶಿಕ್ಷಕಿ ವೀಣಾ ನಾಯ್ಕ್ ಅವರು ಕನ್ನಡ ನಾಡಿನ ಭವ್ಯ ಇತಿಹಾಸ ಮತ್ತು ಸಂಸ್ಕೃತಿಯ ಶ್ರೇಷ್ಠತೆಯ ಕುರಿತು ಅಚ್ಚುಕಟ್ಟಾಗಿ ತಮ್ಮ ಮಾತುಗಳಲ್ಲಿ ತೆರೆದಿಟ್ಟರು. ದೈಹಿಕ ಶಿಕ್ಷಣ ಶಿಕ್ಷಕ ರಾಮದಾಸ್ ಶೇಡಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಂಸ್ಥೆಯ ಪ್ರಾಚಾರ್ಯರು ಎಲ್ಲರಿಗೂ ವಂದಿಸಿದರು.


