ಕುಮಟಾ: ತಮ್ಮ ಸೇವಾವಧಿಯ ಕೊನೆಯ ಕೇವಲ ಆರು ತಿಂಗಳುಗಳಲ್ಲಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಮೌಲ್ಯಯುತ ಬದಲಾವಣೆ ತಂದು ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಮಿರ್ಜಾನ-ಕೋಡ್ಕಣಿಯ ಜನತಾ ವಿದ್ಯಾಲಯದ ನಿವೃತ್ತ ಮುಖ್ಯಾಧ್ಯಾಪಕ ಈಶ್ವರ ವೆಂಕಟ್ರಮಣ ಭಟ್ಟ (ಐ.ವಿ. ಭಟ್ಟ) ಅವರನ್ನು ‘ಕರ್ನಾಟಕ ರಣಧೀರರ ವೇದಿಕೆ’ಯ ಕುಮಟಾ ತಾಲ್ಲೂಕು ಘಟಕದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷರಾದ ‘ಕನ್ನಡದ ಸಮೀರರು
ಐ.ವಿ. ಭಟ್ಟರ ಸೇವಾ ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಭಟ್ಟರು ತಮ್ಮ ಸುದೀರ್ಘ ವೃತ್ತಿಜೀವನದ ಬಹುಪಾಲು ಸೇವೆಯನ್ನು ಬೇರೆಡೆ ಸಲ್ಲಿಸಿದ್ದರೂ, ನಿವೃತ್ತಿಯ ಅಂಚಿನಲ್ಲಿ ಕೇವಲ ಆರು ತಿಂಗಳ ಮಟ್ಟಿಗೆ ಬಡ್ತಿ ಹೊಂದಿ ಮಿರ್ಜಾನಿನಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆಗೆ ನಿಯೋಜನೆಗೊಂಡರು. ತಮಗೆ ಸಿಕ್ಕ ಈ ಅತ್ಯಲ್ಪ ಅವಧಿಯನ್ನೇ ಸದುಪಯೋಗಪಡಿಸಿಕೊಂಡ ಅವರು, ತಮ್ಮ ಪ್ರಾಮಾಣಿಕ ಹಾಗೂ ಮೌಲ್ಯಯುತ ಕಾರ್ಯವೈಖರಿಯ ಮೂಲಕ ಶಾಲೆಯ ಇತಿಹಾಸದಲ್ಲಿ ಹೊಸ ಚರಿತ್ರೆಯನ್ನೇ ಸೃಷ್ಟಿಸಿದರು. ಇಂದು ಅವರು ಮಿರ್ಜಾನಿನ ಜನರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ,” ಎಂದರು.
ಮುಂದುವರಿದು, “ಇಂತಹ ಅದ್ವಿತೀಯ ಹಾಗೂ ಚಾರಿತ್ರಿಕ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು ಸಮಾಜದ ಹೊಣೆಗಾರಿಕೆಯಾಗಿದೆ. ಮುಂಬರುವ ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ, ನಾಡು-ನುಡಿಯ ಪರವಾಗಿ ಸದಾ ನಿಲ್ಲುವ ಕರ್ನಾಟಕ ರಣಧೀರ ವೇದಿಕೆಯು ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಮಗೆ ಅತೀವ ಹೆಮ್ಮೆಯ ತಂದಿದೆ,” ಎಂದು ಅವರು ನುಡಿದರು.
ಜನರ ಪ್ರೀತಿಗೆ ನಾನು ಚಿರಋಣಿ: ಸನ್ಮಾನ ಸ್ವೀಕರಿಸಿ ಭಾವಪರವಶರಾಗಿ ಮಾತನಾಡಿದ ನಿವೃತ್ತ ಮುಖ್ಯಾಧ್ಯಾಪಕ ಐ.ವಿ. ಭಟ್ಟ ಅವರು, “ಮಿರ್ಜಾನಿನಲ್ಲಿ ನಾನು ಸೇವೆ ಸಲ್ಲಿಸಿದ ಸಮಯ ತೀರಾ ಕಡಿಮೆಯಾದರೂ, ಇಲ್ಲಿನ ಜನತೆ ನನ್ನ ಮೇಲೆ ತೋರಿದ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ಬೆಲೆಕಟ್ಟಲಾಗದ್ದು. ಅವರು ನೀಡಿದ ಈ ಅಕ್ಕರೆಗೆ ನಾನು ಎಷ್ಟು ಮಣಿದರೂ ಕಡಿಮೆಯೇ,” ಎಂದು ಕೃತಜ್ಞತೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಂಜುನಾಥ ಗಾಂವಕರ, ಹಿರಿಯ ಪತ್ರಕರ್ತ ಜಿ.ಡಿ. ಶಾನಭಾಗ, ಮಂಜು ನಾಯ್ಕ್, ಮಂಜು ನಾಯಕ, ಹಿರಿಯ ಶಿಕ್ಷಕಿ ಉಮಾ ಹೆಗಡೆ ಹಾಗೂ ಸಂತ ಸೇವಾಲಾಲ ಸಂಘದ ಅಧ್ಯಕ್ಷ ಶಿವಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


