ಹೊನ್ನಾವರ: ತಾಲೂಕಿನ ಖರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಲುಗುಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಆಯೋಜಿಸಲಾದ ‘ಸಂಭ್ರಮ ಶನಿವಾರ’ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಮಹತ್ವ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಚ್ಛತಾ ಸಿಬ್ಬಂದಿಗಳನ್ನು ಗುರುತಿಸಿ ಶಾಲೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮ ಪಂಚಾಯತ್ ಸ್ವಚ್ಛತಾ ಸಿಬ್ಬಂದಿಗಳಿಗೆ ಸರ್ಕಾರಿ ಶಾಲೆಗಳಿಂದ ಗೌರವಿಸಿರುವುದು ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ಸಾಮಾನ್ಯವಾಗಿ ಶಾಲಾ ಕಾರ್ಯಕ್ರಮಗಳಲ್ಲಿ ಗಣ್ಯರು ಹಾಗೂ ಸಾಧಕರನ್ನು ಸನ್ಮಾನಿಸುವುದು ವಾಡಿಕೆ. ಆದರೆ, ಪ್ರತಿದಿನ ಗ್ರಾಮಗಳ ಸ್ವಚ್ಛತೆಗಾಗಿ ಶ್ರಮಿಸುವ ಸ್ವಚ್ಛತಾ ಸಿಬ್ಬಂದಿಗಳನ್ನು ಶಾಲೆಗೆ ಆಹ್ವಾನಿಸಿ, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗೌರವಿಸಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಅದರಲ್ಲೂ ಗ್ರಾಮ ಪಂಚಾಯತಿಯಲ್ಲಿ ಮಹಿಳೆಯೊಬ್ಬರು ವಾಹನ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಅತ್ಯಂತ ಕ್ರಿಯಾಶೀಲವಾಗಿ ನಿರ್ವಹಿಸುತ್ತಿರುವುದನ್ನು ಗುರುತಿಸಿ ಗೌರವಿಸಿರುವುದು ಶಿಕ್ಷಕರ ಸಾಮಾಜಿಕ ಕಾಳಜಿ ಮತ್ತು ವಿಶಿಷ್ಟ ಚಿಂತನೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ನಾಯಕ್ ಅವರು ಮಾತನಾಡಿ
ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಮಹತ್ವ, ವೈಯಕ್ತಿಕ ಸ್ವಚ್ಛತೆ, ಶಾಲಾ ಪರಿಸರದ ಶುಚಿತ್ವ, ತ್ಯಾಜ್ಯ ವಿಂಗಡಣೆ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಕುರಿತು ವಿವರವಾಗಿ ತಿಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳ ಶ್ರಮವನ್ನು ಗೌರವಿಸುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಸ್ವಚ್ಛತೆ ಕೇವಲ ಒಂದು ಇಲಾಖೆಯ ಅಥವಾ ಸಿಬ್ಬಂದಿಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿಗಳಾದ ಶ್ರೀಮತಿ ಆಶಾ ಸತೀಶ್ ನಾಯಕ್, ಶ್ರೀಮತಿ ನೀಲಾವತಿ ಮಂಜುನಾಥ್ ಗೌಡ ಹಾಗೂ ಶ್ರೀಮತಿ ಆಶಾ ವಿನಾಯಕ ನಾಯ್ಕ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯ ಶಿಕ್ಷಕಿ ನಜೀಮಾ ಬಾನು ಅವರ ಸಾಮಾಜಿಕ ಕಾಳಜಿ ಹಾಗೂ ವಿನೂತನ ಪರಿಕಲ್ಪನೆಗೆ ಕರ್ವ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಶಾಲೆಯ ಶಿಕ್ಷಕರಾದ ಮಾಲಿನಿ ಹೆಗಡೆ, ಪೂರ್ಣಿಮಾ ಭಟ್, ದಿವ್ಯ ಆಚಾರಿ ಹಾಗೂ ಪಲ್ಲವಿ ಉಪಸ್ಥಿತರಿದ್ದರು.ಶ್ರಮಜೀವಿಗಳನ್ನು ಗುರುತಿಸಿ, ಗೌರವಿಸುವ ಮೂಲಕ ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯ ಹಾಗೂ ಸ್ವಚ್ಛತೆಯ ಅರಿವು ಮೂಡಿಸಿದ ಎಲುಗುಪ್ಪ ಶಾಲೆಯ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


