ಹಣ ಡಬಲ್ ಮಾಡುವ ಆಮಿಷ: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ಕುಮಟಾದ ವ್ಯಕ್ತಿಗೆ 9.34 ಲಕ್ಷ ರೂ. ವಂಚನೆ..!!

News Desk
1 Min Read

ಕುಮಟಾ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ನಂಬಿಸಿ ಸೈಬರ್ ವಂಚಕರ ಜಾಲವೊಂದು ಕುಮಟಾ ಗಾಂಧಿನಗರದ ನಿವಾಸಿ ಗಣೇಶ್ ನಾಗೇಶ್ ಶೇಟ್ (43) ಎಂಬುವವರಿಗೆ ಬರೋಬ್ಬರಿ 9,34,413 ರೂಪಾಯಿ ವಂಚಿಸಿದ ಘಟನೆ ವರದಿಯಾಗಿದೆ.

ಕಳೆದ 2025ರ ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ವಂಚಕರು ಫೇಸ್‌ಬುಕ್ ಮೆಸೆಂಜರ್ ಮೂಲಕ ಗಣೇಶ್ ಅವರನ್ನು ಸಂಪರ್ಕಿಸಿ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದರು. ಬಳಿಕ ವಾಟ್ಸಾಪ್ ಲಿಂಕ್ ಕಳುಹಿಸಿ ‘Intelligent 04’ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದರು. ಸುಮಾರು 1 ತಿಂಗಳ ಕಾಲ ಆ ಗ್ರೂಪ್‌ನಲ್ಲಿದ್ದ ಸಾಕಷ್ಟು ಜನರು ಹಣ ಹೂಡಿಕೆ ಮಾಡಿ ಲಾಭ ಗಳಿಸುತ್ತಿರುವುದನ್ನು ಗಮನಿಸಿದ ಗಣೇಶ್ ಅವರನ್ನು, ವಂಚಕರು +91 6206263969 ಮೊಬೈಲ್ ಸಂಖ್ಯೆಯಿಂದ ನೇರವಾಗಿ ಸಂಪರ್ಕಿಸಿ ಟ್ರೇಡಿಂಗ್‌ನಲ್ಲಿ ತೊಡಗಿಸಿಕೊಳ್ಳುವಂತೆ ಪುಸಲಾಯಿಸಿದ್ದರು.

ನಂತರ ವಂಚಕರು ಕಳುಹಿಸಿದ ಲಿಂಕ್ ಮೂಲಕ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿಕೊಂಡ ಗಣೇಶ್, ಅದರಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ದಾಖಲಿಸಿ, ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ (UPI) ಐಡಿಗಳಿಗೆ ಹಂತ ಹಂತವಾಗಿ ಒಟ್ಟು 9,34,413 ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಹಣ ಪಡೆದ ಬಳಿಕ ವಂಚಕರು ಯಾವುದೇ ಮೊತ್ತವನ್ನು ಹಿಂತಿರುಗಿಸದೇ ವಂಚಿಸಿದ್ದಾರೆ. ಹಣ ಕಳೆದುಕೊಂಡ ಗಣೇಶ್ ಅವರು ಆರಂಭದಲ್ಲಿ ಆನ್‌ಲೈನ್ ಮೂಲಕವೇ ಸೈಬರ್ ದೂರು ದಾಖಲಿಸಿದ್ದರು ಹಾಗೂ ಅದರಿಂದಲೇ ಹಣ ವಾಪಸ್ ಸಿಗಬಹುದು ಎಂದು ಕಾದಿದ್ದರು.

ಆದರೆ, ಬ್ಯಾಂಕ್ ಮ್ಯಾನೇಜರ್ ಅವರ ಸಲಹೆಯ ಮೇರೆಗೆ ಇದೀಗ ಕುಮಟಾ ಪೊಲೀಸ್ ಠಾಣೆಗೆ ಬಂದು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (ಸೆಕ್ಷನ್ 66(D)) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 318(4), 319(2) ಅಡಿಯಲ್ಲಿ (ಕ್ರೈಂ ನಂಬರ್ 0090/2026) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment