ಅಂಕೋಲಾ: ತಾಲೂಕಿನ ಮಾದನಗೇರಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಎರಡು ಟ್ರಕ್‌ಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಂಕೋಲಾ ಕಡೆಯಿಂದ ಕುಮಟಾ ದಿಕ್ಕಿನತ್ತ ಚಲಿಸುತ್ತಿದ್ದ ಟ್ರಕ್ ಒಂದು(NL01AG5494) ಅದೇ ಸಮಯಕ್ಕೆ ಹೆದ್ದಾರಿಯಿಂದ ಅಡ್ಡಲಾಗಿ ಹಿಲ್ಲೂರು ರಸ್ತೆಯತ್ತ ತಿರುವು ಪಡೆಯುತ್ತಿದ್ದ ಮತ್ತೊಂದು ಟ್ರಕ್‌ನ( KL 21 AA8455) ಹಿಂಭಾಗಕ್ಕೆ ರಭಸವಾಗಿ ಗುದ್ದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಾಹನಗಳ ಮುಂಭಾಗ ಹಾಗೂ ಹಿಂಭಾಗಕ್ಕೆ ಹಾನಿಯಾಗಿದೆ.

ಅಪಘಾತದ ತಕ್ಷಣವೇ ಸ್ಥಳದಲ್ಲಿ ಭಾರೀ ಸದ್ದು ಕೇಳಿಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಕ್ರಾಸ್ ಹಾಗೂ ತಿರುವುಗಳ ಬಳಿ ವಾಹನಗಳು ವೇಗಮಿತಿ ಕಾಯ್ದುಕೊಳ್ಳದಿರುವುದು ಹಾಗೂ ಚಾಲಕರ ನಿರ್ಲಕ್ಷ್ಯವೇ ಇಂತಹ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.
ಮಾದನಗೇರಿ ಕ್ರಾಸ್ ಬಳಿ ವಾಹನಗಳು ತಿರುವು ಪಡೆಯುವಾಗ ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಘಟನೆಗೆ ಚಾಲಕನ ನಿರ್ಲಕ್ಷ್ಯ, ಅತಿವೇಗ ಕಾರಣವೇ ಅಥವಾ ವಾಹನದ ತಾಂತ್ರಿಕ ದೋಷವೇ ಎಂಬ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದ್ದು, ಪೊಲೀಸ್ ವಿಚಾರಣೆಯ ಬಳಿಕವಷ್ಟೇ ಅಪಘಾತದ ನಿಖರ ಕಾರಣ ತಿಳಿದುಬರಬೇಕಿದೆ.


