ಹುಬ್ಬಳ್ಳಿ–ಅಂಕೋಲಾ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ ಆಳವಾದ ಕಂದಕಕ್ಕೆ ಪಲ್ಟಿ; ವಜ್ರಳ್ಳಿ ಬಳಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರ..

News Desk
1 Min Read

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪ್ರಪಾತಕ್ಕೆ ಉರುಳಿದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ವಜ್ರಳ್ಳಿ ಸಮೀಪದ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ.

ಕಾರವಾರದಿಂದ ರಾಯಚೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌, ಯಲ್ಲಾಪುರ ಮತ್ತು ಅಂಕೋಲಾ ನಡುವಿನ ವಜ್ರಳ್ಳಿ ಸಮೀಪ ಬರುತ್ತಿದ್ದಂತೆ ಈ ಅವಘಡ ನಡೆದಿದೆ. ಬಸ್‌ ಅತೀ ವೇಗದಲ್ಲಿದ್ದ ಕಾರಣ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯ ಆಳವಾದ ಕಂದಕಕ್ಕೆ ಪಲ್ಟಿಯಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ತಲೆ ಮತ್ತು ಎದೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇದರಿಂದಾಗಿ ಸಾವು-ನೋವಿನ ಆತಂಕ ಎದುರಾಗಿದೆ.

ಅಪಘಾತದ ವಿಷಯ ತಿಳಿದ ತಕ್ಷಣ ಅಂಕೋಲಾ ಹಾಗೂ ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ಮತ್ತು ರಕ್ಷಣಾ ತಂಡಗಳ ನೆರವಿನೊಂದಿಗೆ ಕಂದಕದಲ್ಲಿದ್ದ ಗಾಯಾಳುಗಳನ್ನು ಮೇಲೆತ್ತಿ, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ.

ಘಟನಾ ಸ್ಥಳದಲ್ಲಿ ಬಸ್‌ ಬಿದ್ದಿರುವ ರೀತಿ ನೋಡಿದರೆ ಅನಾಹುತದ ತೀವ್ರತೆ ಅರಿವಾಗಲಿದ್ದು, ಅದೃಷ್ಟವಶಾತ್ ಭಾರೀ ಪ್ರಾಣಹಾನಿ ತಪ್ಪಿದಂತಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ..

Share This Article