ಬೇಲೆಕೇರಿಯಿಂದ ಮಂಗಳೂರಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ: 11 ತಿಂಗಳ ಬಳಿಕ ಪೋಲಿಸ್ ಠಾಣೆ ಮೆಟ್ಟಿಲೇರಿದ ವೃದ್ಧ ತಂದೆ.!

News Desk
1 Min Read

ಅಂಕೋಲಾ: ಮಂಗಳೂರಿಗೆಂದು ಕೆಲಸದ ನಿಮಿತ್ತ ತೆರಳಿದ್ದ ತಾಲೂಕಿನ ಬೇಲೆಕೇರಿ ಮೂಲದ ಕಾರ್ಮಿಕನೋರ್ವ ಕಳೆದ 11 ತಿಂಗಳುಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಮಗನ ಬರುವಿಕೆಗಾಗಿ ಕಾಯ್ದು ಸುಸ್ತಾದ ವೃದ್ಧ ತಂದೆ ಇದೀಗ ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬೇಲೆಕೇರಿ ನಿವಾಸಿ, ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಗಿರೀಶ ಜಾತೂರ ನಾಯ್ಕ (42) ಕಣ್ಮರೆಯಾದ ವ್ಯಕ್ತಿ. ಈತ ಕಳೆದ ವರ್ಷ ಜೂನ್ 26 (26-06-2025) ರಂದು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಂಗಳೂರಿಗೆ ಹೋಗುವುದಾಗಿ ಹೇಳಿ ನಿರ್ಗಮಿಸಿದ್ದನು. ಆದರೆ, ಅಂದಿನಿಂದ ಈವರೆಗೂ ಆತ ಮನೆಗೆ ಮರಳಿಲ್ಲ ಹಾಗೂ ಆತನ ಇರುವಿಕೆಯ ಕುರಿತು ಯಾವುದೇ ಖಚಿತ ಮಾಹಿತಿಯೂ ಕುಟುಂಬದವರಿಗೆ ಲಭ್ಯವಾಗಿಲ್ಲ.

ಮಗ ಎಲ್ಲೋ ಕೆಲಸಕ್ಕೆ ಹೋಗಿರಬಹುದು, ಇಂದು-ನಾಳೆ ಮರಳಿ ಬರಬಹುದು ಎಂದು ಆಸೆಯಿಂದ ಕಾದ 68 ವರ್ಷದ ವೃದ್ಧ ತಂದೆ ಜಾತೂರ ಲಕ್ಷ್ಮಣ ನಾಯ್ಕ ಅವರು, ಕೊನೆಗೂ ಮಗನ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ, ಮೇ 25, 2026 ರಂದು ಅಂಕೋಲಾ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಿ ಗಣಕೀಕೃತ ದೂರನ್ನು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ (ಕ್ರೈಂ ನಂ: 98/2026) ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ನಾಪತ್ತೆಯಾದ ವ್ಯಕ್ತಿಯ ಚಹರೆ: ಕಣ್ಮರೆಯಾಗಿರುವ ಗಿರೀಶ್ ಸುಮಾರು 5.3 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ದುಂಡು ಮುಖ ಮತ್ತು ಸದೃಢ ಮೈಕಟ್ಟು ಹೊಂದಿದ್ದಾನೆ. ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆಗಳನ್ನು ಬಲ್ಲ ಈತ, ಮನೆಯಿಂದ ಹೊರಡುವಾಗ ಹಳದಿ ಬಣ್ಣದ ಚೌಕಳಿ (ಚೆಕ್ಸ್) ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿ ನೀಡಲು ಮನವಿ: ಈ ಮೇಲಿನ ಚಹರೆಯುಳ್ಳ ವ್ಯಕ್ತಿಯ ಕುರಿತು ಎಲ್ಲಾದರೂ ಮಾಹಿತಿ ಅಥವಾ ಸುಳಿವು ಕಂಡುಬಂದಲ್ಲಿ, ಸಾರ್ವಜನಿಕರು ಕೂಡಲೇ ಅಂಕೋಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಪ್ರಕಟಣೆ ಮೂಲಕ ಕೋರಿದ್ದಾರೆ. ಮಾಹಿತಿದಾರರು ದೂರವಾಣಿ ಸಂಖ್ಯೆ: 08388-220333, ಮೊಬೈಲ್ ಸಂಖ್ಯೆ: 9480805250 / 9480805268 ಅಥವಾ ಇ-ಮೇಲ್: ankolakwr@ksp.gov.in ಮೂಲಕ ಸಂಪರ್ಕಿಸಬಹುದಾಗಿದೆ.

Share This Article
Leave a Comment