ಶಿರೂರು ದುರಂತ: ಗಂಗಾವಳಿ ನದಿಗೆ ಉರುಳಿದ್ದ ಗುಡ್ಡದ ಮಣ್ಣು ತೆರವಿಗೆ 4.35 ಕೋಟಿ ರೂ. ಮಂಜೂರು; ಟೀಕಾಕಾರರಿಗೆ ‘ಸತೀಶ್ ಸೈಲ್’ ಕಾರ್ಯತಂತ್ರದ ತಿರುಗೇಟು..!

News Desk
2 Min Read

ಅಂಕೋಲಾ : ಮುಂಗಾರು ಕರಾವಳಿಯನ್ನು ಆವರಿಸುತ್ತಿರುವ ಬೆನ್ನಲ್ಲೇ, ಶಿರೂರು ಭಾಗದ ಜನರನ್ನು ಕಾಡುತ್ತಿದ್ದ ಕೃತಕ ಪ್ರವಾಹದ ಭೀತಿಗೆ ಕೊನೆಗೂ ಆಡಳಿತಾತ್ಮಕ ಪರಿಹಾರ ದೊರಕಿದೆ. 2024ರ ಜುಲೈನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ಒಡಲು ಸೇರಿದ್ದ ಅಪಾರ ಪ್ರಮಾಣದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಆಡಳಿತಾತ್ಮಕ ಜಡತ್ವದ ಸುಳಿಯಿಂದ ಹೊರಬಂದಿದೆ. ಇದೆ ವಿಷಯವನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದ ಟೀಕಾಕಾರರಿಗೆ, ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರು ₹4.35 ಕೋಟಿ ಮಂಜೂರು ಮಾಡಿಸುವ ಮೂಲಕ ‘ಕಾರ್ಯ’ರೂಪದ ತಾರ್ಕಿಕ ತಿರುಗೇಟು ನೀಡಿದ್ದಾರೆ.

ಮಣ್ಣು ತೆರವಿಗೆ ₹4.34 ಕೋಟಿಗಳ ವಾಸ್ತವಿಕ ಅವಶ್ಯಕತೆಯಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇವಲ ₹2 ಕೋಟಿಗಳನ್ನು ನೀಡಿ ಜಾರಿಕೊಂಡಿತ್ತು. ಆರ್ಥಿಕ ಅಸಮತೋಲನ ದಿಂದಾಗಿ ಸತತ ನಾಲ್ಕು ಬಾರಿ ಕರೆಯಲಾದ ಟೆಂಡರ್‌ಗಳು ವಿಫಲಗೊಂಡವು. ಇದನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದ ಕೆಲವರು, ಶಾಸಕರ ಬಗ್ಗೆ ವ್ಯವಸ್ಥಿತ ಅಪಪ್ರಚಾರಕ್ಕೆ ಇಳಿದಿದ್ದರು.

ಟೀಕೆಗಳಿಗೆ ಬಾಯಿಮಾತಿನ ಉತ್ತರ ನೀಡದೆ, ಶಾಸಕ ಸೈಲ್ ಸಮಸ್ಯೆಯನ್ನು ನೇರವಾಗಿ ವಿಧಾನಸೌಧದ ಮೊಗಸಾಲೆಗೆ ಕೊಂಡೊಯ್ದರು. ‘ಮಣ್ಣನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸದಿದ್ದರೆ ಸುತ್ತಮುತ್ತಲಿನ ಗ್ರಾಮಗಳು ಜಲಸಮಾಧಿಯಾಗುವ ಅಪಾಯವಿದೆ’ ಎಂಬ ವಾಸ್ತವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂದಿಟ್ಟರು. ಇದರ ಫಲವಾಗಿ, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಬಾಕಿ ₹2.34 ಕೋಟಿಗಳ ವಿಶೇಷ ಅನುದಾನ ಬಿಡುಗಡೆಯಾಗಿದೆ.

“ನಾವು ಬಾಯಿಮಾತಿನಲ್ಲಿ ಅಲ್ಲ, ಕೆಲಸ ಮಾಡಿ ತೋರಿಸುತ್ತೇವೆ”: ಶಾಸಕರ ನುಡಿ..

ಈ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸತೀಶ್ ಸೈಲ್, “ಜನರ ಪ್ರಾಣರಕ್ಷಣೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ. ಕೇವಲ ಬಾಯಿಮಾತಿನಲ್ಲಿ ಆರೋಪ ಮಾಡುವವರ ನಡುವೆ, ನಮ್ಮ ಕಡತಗಳ ಹೋರಾಟ ಸರ್ಕಾರದ ಮಟ್ಟದಲ್ಲಿ ಸದ್ದಿಲ್ಲದೆ ನಡೆಯುತ್ತಿತ್ತು. ಮಾತನಾಡುವವರು ಮಾತನಾಡಲಿ, ನಮ್ಮ ಕೆಲಸವೇ ಅವರಿಗೆ ಉತ್ತರಿಸಲಿದೆ. ಕಾಮಗಾರಿ ಶೀಘ್ರದಲ್ಲೇ ಯುದ್ಧೋಪಾದಿಯಲ್ಲಿ ಆರಂಭವಾಗಲಿದ್ದು, ಶಿರೂರು ಹಾಗೂ ಅಕ್ಕಪಕ್ಕದ ಜನರು ನೆರೆಯ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟ ಮಾತುಗಳಲ್ಲಿ ಅಭಯ ನೀಡಿದ್ದಾರೆ.

ಜೊತೆಗೆ, ಕ್ಷೇತ್ರದ ಜನರ ಹಿತದೃಷ್ಟಿಯಿಂದ ತ್ವರಿತವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಸ್.ಡಿ.ಎಂ.ಎ ಆಯುಕ್ತ ಎಸ್. ಪೊನ್ನಂಬಾ ಹಾಗೂ ಜಿಲ್ಲಾಧಿಕಾರಿಗಳಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದ್ದಾರೆ.

Share This Article
Leave a Comment