ಅಂಕೋಲಾ: ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ಘಟಕದ ವತಿಯಿಂದ ಸಾಧಕ ಯುವ ಪ್ರತಿಭೆಗಳಾಗಿರುವಸಂಘಟನೆಯ ಸದಸ್ಯರ ಮಕ್ಕಳನ್ನುಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ವಕೀಲ ವೃತ್ತಿಯ ಅರ್ಹತೆಯನ್ನು ಪಡೆದ ಸ್ನೇಹಾ ವಿದ್ಯಾಧರ ಮೊರಬಾ ಮತ್ತು ನೃತ್ಯ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿರುವ ನಿಧಿ ನಾಗರಾಜ ಶೆಟ್ಟಿ ಅವರನ್ನು ಶ್ರೀವೆಂಕಟರಮಣ ದೇವಾಲಯದ ಹೊರ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾದ ಉಮೇಶ ನಾಯ್ಕ ಸನ್ಮಾನ ನೆರವೇರಿಸಿ ಮಾತನಾಡಿ ವಕೀಲರು ಮತ್ತು ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ ಸಮಾಜದ ಆಗು ಹೋಗುಗಳನ್ನು ತಮ್ಮ ವರದಿಗಳ ಮೂಲಕ ತೆರೆದಿಡುವ ಪತ್ರಕರ್ತರು, ಹಲವು ಬಾರಿ ತಮ್ಮ ಮತ್ತು ತಮ್ಮ ಕುಟುಂಬಸ್ಥರ ಸಾಧನೆಗೆ ಪ್ರಚಾರ ನೀಡದೇ ದೂರ ಇರುತ್ತಾರೆ. ಇಲ್ಲಿನ ಪತ್ರಕರ್ತರುಬಡತನ, ಆರ್ಥಿಕ ಅನಾನುಕೂಲತೆಯ ನಡುವೆಯೂ ತಮ್ಮ ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಾಧನೆಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಉತ್ತಮ ಸಾಧಕರನ್ನಾಗಿ ಮಾಡಿರುವುದು ಮೆಚ್ಚುವ ವಿಚಾರವಾಗಿದ್ದು ಪತ್ರಕರ್ತರ ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವಾಯ್ ನಾಯ್ಕ ಮಾತನಾಡಿ ಸದಾ ಸಮಾಜದ ಕುರಿತು ಚಿಂತನೆಗಳನ್ನು ಮಾಡಿ ಎಲ್ಲರ ಸಾಧನೆಗಳನ್ನು ತಮ್ಮ ಬರಹದ ಮೂಲಕ ಸಮಾಜಕ್ಕೆ ಸಾರುವ ಪತ್ರಕರ್ತರ ಕುಟುಂಬಗಳಲ್ಲೂ ಸಾಧಕರಿದ್ದು ಅವರ ಸಾಧನೆಯೂ ಗುರುತಿಸಲ್ಪಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಮಾರುತಿ ಹರಿಕಂತ್ರ ಪ್ರಾಸ್ತಾವಿಕ ಮಾತನಾಡಿ, ಪತ್ರಕರ್ತರು ಸಾಮಾಜಿಕವಾಗಿ ಎಲ್ಲಾ ವಲಯಗಳ ಸಾಧಕ ಬಾಧಕಗಳ ಬಗ್ಗೆ ವರದಿ ಮಾಡುತ್ತಾರೆ. ಹತ್ತಾರು ಸಾಧಕರನ್ನು ಪರಿಚಯಿಸುತ್ತಾರೆ. ಆದರೆ ಅವರ ಕುಟುಂಬದ ಮಕ್ಕಳು ಸಾಧನೆ ಮಾಡಿದ್ದಲ್ಲಿ ಅದು ಗೌಣವಾಗಿಯೇ ಉಳಿಯುತ್ತದೆ. ಆರ್ಥಿಕ ಸಂಕಷ್ಟಗಳ ನಡುವೆ ಪತ್ರಕರ್ತರ ಮಕ್ಕಳು ಮಾಡುವ ಸಾಧನೆಯನ್ನು ಕುಟುಂಬವಾಗಿ ನಾವು ಸಂಭ್ರಮಿಸಿ ಅವರಿಗೆ ಹಾರೈಸುತ್ತಿದ್ದೇವೆ. ಶ್ರದ್ಧಾಪೂರ್ವಕ ಹಾಗೂ ಇಚಾಶಕ್ತಿಯಂತೆ ಸ್ನೇಹಾ ಮೊರಬಾ ಅವರು ವಕೀಲೆ ಪದವಿ ಪಡೆದು ಬೆಂಗಳೂರಿನಲ್ಲಿ ವೃತ್ತಿತರಬೇತಿ ಆರಂಭಿಸಲಿದ್ದಾರೆ. ನಿಧಿ ಶೆಟ್ಟಿ, ರಾಷ್ಟ್ರ ಮಟ್ಟದ ಎರಡು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ದ್ವೀತಿಯ ಸ್ಥಾನ ಪಡೆದ ತಂಡದ ನೃತ್ಯಪಟು. ಅಲ್ಲದೇ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಸತತ ಎರಡು ಬಾರಿ ಫೈನಲ್ ಹಂತ ತಲುಪಿ ಒಂದು ಬಾರಿ ಬೆಳ್ಳಿ ಹಾಗೂ ಇನ್ನೊಂದು ಬಾರಿ ಸಮಾಧಾನಕರ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ ಎಂದರು.
ಪತ್ರಕರ್ತ ವಿಲಾಸ ನಾಯಕ, ಸಾಮಾಜಿಕ ಕಾರ್ಯಕರ್ತ ಬಡಗೇರಿಯ ಮಹೇಶ ಗೌಡ ಪತ್ರಕರ್ತರ ಮಕ್ಕಳ ಸಾಧನೆಗೆ ನಿರಂತರ ಪ್ರೋತ್ಸಾಹ ನೀಡುತ್ತೇವೆ ಎಂದರು. ಸನ್ಮಾನಿತರ ಪಾಲಕರಾದ ಪತ್ರಕರ್ತ ವಿದ್ಯಾಧರ ಮೊರಬಾ, ಪತ್ರಕರ್ತ ನಾಗರಾಜ ಶೆಟ್ಟಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಸ್ನೇಹಾ ಮೊರಬಾ, ನಿಧಿ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಧ್ವನಿಯ ಕಾರ್ಯದರ್ಶಿ ಕಿರಣ ಗಾಂವಕರ, ಕಾರ್ಯನಿರತ ಪತ್ರಕರ್ತರ ಧ್ವನಿಯ ರಾಜ್ಯ ಸಮಿತಿ ಸದಸ್ಯ ಸೂರಜ್ ನಾಯ್ಕ ,ಸುಪ್ರಿಯಾ ನಾಯ್ಕ, ಪ್ರಿಯಾ ಶೆಟ್ಟಿ ಉಪಸ್ಥಿತರಿದ್ದರು. ಸದಸ್ಯೆ ಸುಪ್ರಿಯಾ ನಾಯ್ಕ ವಂದಿಸಿದರು.
ವರದಿ: ಕಿರಣ ಗಾಂವಕರ

