ಕಾರವಾರ: ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದ ತಾಲೂಕಿನ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ, ಹುತಾತ್ಮ ವಿನೋದ ನಾಯ್ಕ ಅವರ 21ನೇ ಪುಣ್ಯತಿಥಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಇದೇ ವೇಳೆ ಅವರ ಸ್ಮಾರಕಕ್ಕೆ ಹೊಸದಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಉದ್ಘಾಟಿಸಿ, ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ರೂಪಾಲಿ ನಾಯ್ಕ, “ಭಾರತ ಮಾತೆಗಾಗಿ ತಮ್ಮ ಏಕೈಕ ಮಗನನ್ನೇ ಬಲಿದಾನ ಮಾಡಿದ ವಿನೋದ್ ನಾಯ್ಕ ಅವರ ತಂದೆ ಮಹಾದೇವ ನಾಯ್ಕ ಅವರಿಗೆ ನಮಸ್ಕರಿಸುತ್ತೇನೆ. ಆ ಯೋಧನ ತ್ಯಾಗ ದೇಶಕ್ಕೆ ಅಮೂಲ್ಯವಾದ ರತ್ನವಿದ್ದಂತೆ, ಅದು ಇಂದಿಗೂ ಜೀವಂತವಾಗಿದೆ” ಎಂದರು. ಸ್ಮಾರಕದ ಸುತ್ತಲೂ ಕಾಂಪೌಂಡ್ ಮತ್ತು ಗೇಟ್ ನಿರ್ಮಾಣಕ್ಕೆ ರೂಪಾಲಿ ನಾಯ್ಕ ಅವರು ಸ್ವಂತ ಧನಸಹಾಯ ನೀಡಿದ್ದಕ್ಕಾಗಿ ಹುತಾತ್ಮ ಯೋಧನ ತಂದೆ ಮಹಾದೇವ ನಾಯ್ಕ ಕೃತಜ್ಞತೆ ಸಲ್ಲಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದು ನಾಯ್ಕ ಮತ್ತು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಯೋಧನ ಶೌರ್ಯವನ್ನು ಸ್ಮರಿಸಿ, ಕುಟುಂಬದ ತ್ಯಾಗವನ್ನು ಕೊಂಡಾಡಿದರು.

ಪುಣ್ಯತಿಥಿಯ ನಿಮಿತ್ತ ಸ್ಮಾರಕದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಇದೇ ವೇಳೆ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಉಪಸ್ಥಿತರಿದ್ದವರು: ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ, ಮಾಜಿ ಸದಸ್ಯರಾದ ಕಿಶೋರ ಕಡವಾಡಕರ, ದೇವಿದಾಸ ತಳೇಕರ, ನಿವೃತ್ತ ಸೈನಿಕರಾದ ಶೆಶಾಂಕ ಕಡವಾಡಕರ, ಬಾಲಕೃಷ್ಣ ಭೋವಿ, ಅನಿಲ ನಾಯ್ಕ, ಗಣಪತಿ ಗುರವ, ಕೃಷ್ಣಪ್ಪ ಬಾಂದೇಕರ, ಲಿಂಗೇಶ್ವರ ತಳೇಕರ, ಉದಯ ಮಾಂಜ್ರೇಕರ, ಅಶೋಕ ತಾಮಸೆ, ಪ್ರವೀಣ ಮಾಂಜ್ರೇಕರ ಹಾಗೂ ಪ್ರಮುಖರಾದ ರಾಜಾರಾಮ ನಾಯ್ಕ, ನಂದನ ಮಾಂಜ್ರೇಕರ, ರಾಮನಾಥ ನಾಯ್ಕ, ರೋಹಿದಾಸ ನಾಯ್ಕ, ರೇಖಾ ಆರ್. ನಾಯ್ಕ, ವಿಷ್ಣು ಗಾಯಕ ಸೇರಿದಂತೆ ಗಣ್ಯರು, ಅಭಿಮಾನಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.


