ಅಂಕೋಲಾ, ನ.12 — ಅಂಕೋಲಾ ತಾಲೂಕಿನ ಕೇಣಿಯಲ್ಲಿ ಖಾಸಗಿ ಮೂಲದ ಕಂಪನಿಯ ಮೂಲಕ ವಾಣಿಜ್ಯ ಬಂದರು ನಿರ್ಮಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಯ ವಿರುದ್ಧ ಇಂದು ಅಂಕೋಲಾ ತಹಶೀಲ್ದಾರ್ ಕಚೇರಿಯ ಎದುರು ಸರ್ವ ಸಮಾಜದ ಜನರ ಬೃಹತ್ ಪ್ರತಿಭಟನೆ ಜೋರಾಗಿ ಪ್ರಾರಂಭವಾಯಿತು. “ಅಂಕೋಲಾ ಮತ್ತು ಉತ್ತರ ಕನ್ನಡ ಉಳಿಸಿ” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಜನಪರ ಹೋರಾಟದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಮಹಿಳೆಯರು ಹಾಗೂ ಪುರುಷರು ಭಾಗವಹಿಸಿ, ಕೇಣಿ ವಾಣಿಜ್ಯ ಬಂದರು ಯೋಜನೆ ಸಂಪೂರ್ಣವಾಗಿ ಕೈಬಿಡಬೇಕೆಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಹೋರಾಟಗಾರರ ಪರವಾಗಿ ತಹಶೀಲ್ದಾರ್ ಕಚೇರಿಯ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, ಜಿಲ್ಲೆಯಲ್ಲಿ ಕೈಗಾ, ಕಾಳಿ, ಸೀ ಬರ್ಡ್ ಹಾಗೂ ಬೇಲೆಕೇರಿ ಮುಂತಾದ ಯೋಜನೆಗಳಿಂದ ಈಗಾಗಲೇ ಸಾವಿರಾರು ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ, ರೈತರು ಮತ್ತು ಮೀನುಗಾರರು ಜೀವನೋಪಾಯವಿಲ್ಲದೆ ನರಳುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ. ಇಂತಹ ಸಂದರ್ಭದಲ್ಲಿಯೇ ಮತ್ತೊಂದು ಖಾಸಗೀ ವಾಣಿಜ್ಯ ಬಂದರು ನಿರ್ಮಿಸುವ ಕ್ರಮವು ಜನವಿರೋಧಿ ಮತ್ತು ಪರಿಸರ ವಿರೋಧಿ ಎಂದೂ ಮನವಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮನವಿಯಲ್ಲಿ ಹೋರಾಟಗಾರರು ರಾಜ್ಯ ಸರ್ಕಾರ ಇತ್ತೀಚೆಗೆ ಖಾಸಗಿ ಮೂಲದ ಜಿಂದಾಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿ ಕೊಂಡಿರುವುದು ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಮೀರಿಸುವ ಮತ್ತು ಪರಿಸರವನ್ನು ಹಾಳು ಮಾಡುವ ನಿರ್ಧಾರ ಎಂದು ಖಂಡಿಸಿದ್ದಾರೆ. “ಅಂಕೋಲಾ ತಾಲ್ಲೂಕು ಈಗಾಗಲೇ ಎರಡು ವಾಣಿಜ್ಯ ಬಂದರು ಗಳಿಂದಲೇ ಭಾರ ಹೊತ್ತಿದೆ. ಮೂರನೇ ಬಂದರು ಎಂಬ ಹೆಸರಿನಲ್ಲಿ ಜನರ ಜೀವನೋಪಾಯ ನಾಶ ಮಾಡುವ ಕ್ರಮವನ್ನು ಸರ್ಕಾರ ಕೈಬಿಡದಿದ್ದರೆ ಯೋಜನೆ ಕೈಬಿಡುವವರೆಗೂ ಶಾಂತಿಯುತ ಆದರೆ ತೀವ್ರ ಹೋರಾಟ ಮುಂದುವರಿಯುತ್ತದೆ,” ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಹೋರಾಟಗಾರರು ತಮ್ಮ ಮನವಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು — “ಅಭಿವೃದ್ಧಿಯ ಹೆಸರಿನಲ್ಲಿ ರೈತ ಮತ್ತು ಮೀನುಗಾರರ ಬದುಕಿಗೆ ಕೊಳ್ಳಿ ಇಡುವ ಈ ಅನಾವಶ್ಯಕ ಯೋಜನೆ ಯಾಕೆ? ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಹವಾಲು ಆಲಿಕೆ ಸಭೆಯಲ್ಲಿಯೇ ಹತ್ತು ಸಾವಿರಕ್ಕೂ ಹೆಚ್ಚು ನಾಗರಿಕರು ತಮ್ಮ ಲಿಖಿತ ಆಕ್ಷೇಪಣೆಗಳನ್ನು ನೀಡಿದ್ದರೂ ಸರ್ಕಾರ ಕಿವಿಗೊಡದಿರುವುದು ಜನರ ವಿಶ್ವಾಸಕ್ಕೆ ಧಕ್ಕೆ ತಂದಿದೆ,” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಕಚೇರಿಯ ಎದುರು ನಡೆಯುತ್ತಿರುವ ಧರಣಿಯಲ್ಲಿ ಮಹಿಳೆಯರು, ಮೀನುಗಾರರು, ರೈತರು, ಪರಿಸರ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳು ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡು “ಕರಾವಳಿ ಉಳಿಸೋಣ — ಕೇಣಿ ಬಂದರು ಬೇಡ” ಎಂಬ ಘೋಷಣೆಗಳೊಂದಿಗೆ ಹೋರಾಟ ಸ್ಥಳವನ್ನು ಪ್ರತಿಧ್ವನಗೊಳಿಸಿದರು. ಹೋರಾಟಗಾರರು ಸರ್ಕಾರದಿಂದ ಒಂದು ವಾರದೊಳಗೆ ಯೋಜನೆ ಕೈಬಿಡುವ ಸ್ಪಷ್ಟ ಭರವಸೆ ಸಿಕ್ಕಿಲ್ಲದಿದ್ದರೆ ಅನ್ನಸತ್ಯಾಗ್ರಹ ಸೇರಿದಂತೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

ಹೋರಾಟಗಾರರ ಪರವಾಗಿ ಸಲ್ಲಿಸಲಾದ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರಿಗೆ ತಹಶೀಲ್ದಾರ್ ಕಚೇರಿಯ ಮುಖಾಂತರ ಕಳುಹಿಸಲಾಗಿದ್ದು, ಅದರ ಪ್ರತಿಗಳನ್ನು ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳ್ ವೈದ್ಯರಿಗೆ, ಮಾನವ ಹಕ್ಕು ಆಯೋಗದ ಅಧ್ಯಕ್ಷರಿಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸಹ ರವಾನಿಸಲಾಗಿದೆ. ಹೋರಾಟಗಾರರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು — “ಕರಾವಳಿಯ ಧಾರಣಾ ಸಾಮರ್ಥ್ಯವನ್ನು ಮೀರಿಸುವ, ಪರಿಸರ ನಾಶಮಾಡುವ ಹಾಗೂ ಸಾಂಪ್ರದಾಯಿಕ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸುವ ಕೇಣಿ ವಾಣಿಜ್ಯ ಬಂದರು ಯೋಜನೆಯನ್ನು ಕೂಡಲೇ ಕೈಬಿಡಬೇಕು. ಜಿಲ್ಲೆಯ ರೈತರು, ಮೀನುಗಾರರು ಮತ್ತು ಪರಿಸರ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ,” ಎಂದು ಒತ್ತಾಯಿಸಿದ್ದಾರೆ.
ವರದಿ: ಕಿರಣ ಗಾಂವಕರ

