ಅಂಕೋಲಾ : ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ‘ಓ.ಸಿ-ಮಟಕಾ’ ಜೂಗಾರಾಟದ ಅಡ್ಡೆಯ ಮೇಲೆ ಅಂಕೋಲಾ ಠಾಣೆಯ ಪೊಲೀಸರು ದಿಢೀರ್ ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಿದ ಘಟನೆ ವರದಿಯಾಗಿದೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 173ರ ಅಡಿಯಲ್ಲಿ ಎಫ್ಐಆರ್ (ಎಫ್.ಐ.ಆರ್ ಸಂಖ್ಯೆ: 165/2026) ದಾಖಲಾಗಿದ್ದು, ಆರೋಪಿಯ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 78(3) ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುನೀಲ್ ಹುಲ್ಲೋಳ್ಳಿ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 19, 2026 ರಂದು ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಅಂಕೋಲಾ ತಾಲೂಕಿನ ವಂದಿಗೆಯ 2ನೇ ಕ್ರಾಸ್ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಈ ಅಕ್ರಮ ಜೂಜಾಟ ನಡೆಯುತ್ತಿತ್ತು ಎನ್ನಲಾಗಿದೆ. ನದಿಭಾಗ ಬೊಬ್ರುವಾಡ ನಿವಾಸಿ ಈಶ್ವರ ಡಾಂಗಿ ನಾಯ್ಕ ಎಂಬಾತ ಸಾರ್ವಜನಿಕರಿಗೆ ಆಮಿಷವೊಡ್ಡಿ, ಅದೃಷ್ಟದ ಸಂಖ್ಯೆ ತಾಗಿದರೆ ‘ಒಂದು ರೂಪಾಯಿಗೆ 80 ರೂಪಾಯಿ’ ನೀಡುವುದಾಗಿ ನಂಬಿಸಿ ಹಣದ ಪಂಥಕಟ್ಟಿಸಿಕೊಳ್ಳುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ದಾಳಿ ನಡೆಸಿದ ಪೊಲೀಸರು ಜೂಗಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಹಿಡಿದಿದ್ದಾರೆ. ಕಾರ್ಯಾಚರಣೆಯ ವೇಳೆ ಆರೋಪಿಯ ಬಳಿಯಿದ್ದ 680 ರೂ. ನಗದು, ಓ.ಸಿ ಸಂಖ್ಯೆಗಳನ್ನು ಬರೆದುಕೊಂಡಿದ್ದ ಒಂದು ಕಾಗದ ಹಾಗೂ ಪೆನ್ನನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಾನ್ಯ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆದುಕೊಂಡು, ಆಗಸ್ಟ್ 20 ರಂದು ಅಧಿಕೃತವಾಗಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಈ ಕಾರ್ಯಾಚರಣೆಯು ರವಾನಿಸಿದೆ.


