ಉತ್ತಮ ದಾಖಲಾತಿ ನಿರ್ವಹಣೆ: ಪಿಡಿಒ ‘ಗಿರೀಶ ನಾಯಕ್’ ಅವರಿಗೆ ‘ಉತ್ತಮ ಪಂಚಾಯತ ಅಭಿವೃದ್ಧಿ ಅಧಿಕಾರಿ’ ಪ್ರಶಸ್ತಿ ಪ್ರದಾನ..

News Desk
1 Min Read

ಕಾರವಾರ, (ಏಪ್ರಿಲ್ 24): ಗ್ರಾಮ ಪಂಚಾಯತ ಮಟ್ಟದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಪಾರದರ್ಶಕವಾಗಿ ಕಡತಗಳನ್ನು ನಿರ್ವಹಿಸಿದ ಕಾರ್ಯವೈಖರಿಯನ್ನು ಗುರುತಿಸಿ, ಖರ್ವಾ ಪಂಚಾಯತ ಪಿಡಿಒ ಗಿರೀಶ್ ನಾಯಕ್ ಅವರನ್ನು 2025-26ನೇ ಸಾಲಿನ ‘ಉತ್ತಮ ಪಂಚಾಯತ ಅಭಿವೃದ್ಧಿ ಅಧಿಕಾರಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆಯ ಪ್ರಯುಕ್ತ ಇಂದು ಕಾರವಾರದ ಜಿಲ್ಲಾ ಪಂಚಾಯತದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಜಿಲ್ಲಾ ಪಂಚಾಯತದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ (ಸಿಇಒ) ಶ್ರೀ ದಿಲೀಶ್ ಶಶಿ ಅವರು ಗಿರೀಶ್ ನಾಯಕ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪಂಚಾಯತದ ಆಡಳಿತ ವ್ಯವಸ್ಥೆಯಲ್ಲಿ ‘ದಾಖಲಾತಿ ನಿರ್ವಹಣೆ’ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ವಿವಿಧ ಯೋಜನೆಗಳು, ಅನುದಾನ ಬಳಕೆ ಹಾಗೂ ಪಂಚಾಯತಿಯ ದೈನಂದಿನ ಆಡಳಿತದ ಆಗುಹೋಗುಗಳನ್ನು ಕರಾರುವಾಕ್ಕಾಗಿ ಹಾಗೂ ವ್ಯವಸ್ಥಿತವಾಗಿ ದಾಖಲಿಸುವಲ್ಲಿ ಗಿರೀಶ್ ನಾಯಕ್ ಅವರ ಕಾರ್ಯಕ್ಷಮತೆ ಇತರರಿಗೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಅವರ ಶ್ರಮವನ್ನು ಗುರುತಿಸಿ ಜಿಲ್ಲಾಡಳಿತವು ಈ ಪುರಸ್ಕಾರವನ್ನು ನೀಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಿರೀಶ ನಾಯಕ್ ಅವರು, ತಮ್ಮ ಈ ಸಾಧನೆಗೆ ಸಹಕರಿಸಿದ ಮೇಲಧಿಕಾರಿಗಳಿಗೆ, ಪಂಚಾಯತಿಯ ಎಲ್ಲಾ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತದ ವಿವಿಧ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತ ಗಿರೀಶ್ ನಾಯಕ್ ಅವರಿಗೆ ಜಿಲ್ಲೆಯಾದ್ಯಂತ ಜನಪ್ರತಿನಿಧಿಗಳು ಹಾಗೂ ಸಹೋದ್ಯೋಗಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

Share This Article
Leave a Comment