ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಅಜ್ಜಿಮನೆ ಸ್ಥಳದಲ್ಲಿ ಜೂನ್ 04, 2026ರಂದು ಹಿರಿಯ ಶಿಕ್ಷಕ, ಕವಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ ದಿವಂಗತ ಮಹಾಬಲೇಶ್ವರ ಗಿರಿಯಾ ನಾಯ್ಕ ಅವರ ನುಡಿ ನಮನ ಕಾರ್ಯಕ್ರಮ ಹಾಗೂ ಎಂ.ಜಿ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟನ ಲೋಕಾರ್ಪಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ಮಹಾಬಲೇಶ್ವರ ಗಿರಿಯಾ ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವಿವಿಧ ಗಣ್ಯರು , ಅತಿಥಿಗಳು ಶಿಕ್ಷಕರು ಮಾತನಾಡಿ, ಎಂ .ಜಿ.ಯವರು ಶಿಕ್ಷಕರಾಗಿ, ಸಾಹಿತಿಗಳಾಗಿ ಮಾಡಿದ ಸೇವೆ, ಅವರ ಮಾನವೀಯ ಮೌಲ್ಯ ಗಳನ್ನು, ಸಮಾಜಮುಖಿ ವ್ಯಕ್ತಿತ್ವವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಎಂ.ಜಿ . ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಟ್ರಸ್ಟ್ ನ್ನು ಲೋಕಾರ್ಪಣೆಗೊಳಿಸಿದ ಕೇಶವ ನಾಯ್ಕ , ಶಾಖಾಧಿಕಾರಿ ಕಂದಾಯ ಇಲಾಖೆ, ವಿಧಾನಸೌಧ ಬೆಂಗಳೂರು ಮಾತನಾಡಿ “ಎಂ. ಜಿ.ಯವರಿಗೆ ಸಮಾಜದ ಒಳಿತಿನ ಬಗ್ಗೆ , ಶಿಕ್ಷಣದ ಬಗ್ಗೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಇರುವ ಕಾಳಜಿಯನ್ನು ನೆನಪಿಸಿಕೊಂಡರು. ಜೊತೆಗೆ ಟ್ರಸ್ಟ್ ಮೂಲಕ ಅವರ ಹೆಸರನ್ನು ಜೀವಂತವಾಗಿಸುವುದು ಆ ಮೂಲಕ ಸಮಾಜಕ್ಕೆ ನಾವು ಇನ್ನೂ ಹತ್ತಿರವಾಗಲು ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಕೊಳ್ಳು ವಂತೆ ಕರೆ ಕೊಟ್ಟರು. ಜೊತೆಗೆ ಟ್ರಸ್ಟ್ ಮುಂದೆ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು”.

ಮುಖ್ಯ ಅತಿಥಿಯಾಗಿ ದಿನೇಶ ನಾಯ್ಕ, ಸಹಾಯಕ ವೈಜ್ಞಾನಿಕ ಅಧಿಕಾರಿ ಕ.ರಾ.ಮಾ.ನಿ.ಮಂಡಳಿ ಮಂಗಳೂರು ಮಾತನಾಡಿ “ವ್ಯಕ್ತಿ ನಮ್ಮಿಂದ ದೂರವಾದರೂ ಅವರ ವ್ಯಕ್ತಿತ್ವ ಎಂದು ದೂರವಾಗದು. ಏಕೆಂದರೆ ಅವರು ಎಷ್ಟು ವರ್ಷ ಬದುಕಿದ್ದರೂ ಎನ್ನುವುದಕ್ಕಿಂತ ಬದುಕಿದ್ದಾಗ ಅವರು ತೋರಿದ ಪ್ರೀತಿ, ಕಲಿಸಿದ ವಿದ್ಯೆ, ನೀಡಿದ ಮಾರ್ಗದರ್ಶನ , ಪ್ರೋತ್ಸಾಹ ಮುಖ್ಯವಾದದು. ಅದಕ್ಕಾಗಿ ಅವರ ಕನಸುಗಳನ್ನು ಈ ಟ್ರಸ್ಟ್ ಮೂಲಕ ನನಸು ಮಾಡಲು ಪ್ರಯತ್ನಿಸುತ್ತೇವೆ ಎಂದರು”. ಇನ್ನೋರ್ವ ಮುಖ್ಯ ಅತಿಥಿ ಶ್ರೀ ಉದಯ ನಾಯ್ಕ ,ಕ್ಷೇತ್ರ ಶಿಕ್ಷಣಾಧಿಕಾರಿ, ಕುಮಟಾ ಮಾತನಾಡಿ “ಶಿಕ್ಷಣ ಮತ್ತು ಸಾಹಿತ್ಯದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಸ್ಮರಿಸಿದರು. ಜೊತೆಗೆ ಇಲಾಖೆಯಿಂದ ಸಿಗಬೇಕಾದ ಸೌಲಭ್ಯದ ಬಗ್ಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು”.
ನಿವೃತ್ತ ಬಿ.ಎಚ್.ಇ.ಓ. ಶ್ರೀ ಸಿ.ಡಿ. ನಾಯ್ಕ ಮಾತನಾಡಿ, ಎಂ.ಜಿ. ಅವರ ಹೃದಯ ತುಂಬಿದ ಮಾತು, ಹಿರಿಯರ ಬಗ್ಗೆ ಇದ್ದ ಕಾಳಜಿ, ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ, ಅವರ ಹೃದಯ ವಂತಿಕೆಯನ್ನು ಸ್ಮರಿಸಿದರು.
ಬೆಳಂಬಾರ ಗ್ರಾಮ ಪಂಚಾಯತ ಸದಸ್ಯರಾದ ಮಂಜುನಾಥ ಕೆ. ನಾಯ್ಕ ಮಾತನಾಡಿ “ಪಂಚಾಯತ್ ಸದಸ್ಯನಾಗಿ ಆಯ್ಕೆ ಆದಾಗ, ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಅಂದು ಹರಸಿದ ಕ್ಷಣವನ್ನು ನೆನಪಿಸಿಕೊಂಡರು”.
ನಿವೃತ್ತ ಉಪನ್ಯಾಸಕ ಪ್ರಭಾಕರ ಜಿ. ನಾಯ್ಕ ಮಾತನಾಡಿ ಬೆಂಗಳೂರಿನ ಕನಕಪುರದಲ್ಲಿ ಕಾರ್ಯನಿರ್ವಹಿಸುವಾಗ ಒಟ್ಟಿಗೆ ಇದ್ದ ಬಾಂಧವ್ಯದ ಕ್ಷಣಗಳನ್ನು, ಆತ್ಮೀಯತೆಯನ್ನು ಸ್ಮರಿಸಿದರು. ಮುಖ್ಯ ಶಿಕ್ಷಕರಾದ ಲಕ್ಷ್ಮಣ ಜಿ. ಬಾಡ್ಕರ್ ಮಾತನಾಡಿ ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಮತ್ತು ಮಕ್ಕಳನ್ನು ರಾಜ್ಯಮಟ್ಟದವರೆಗೆ ಸ್ಪರ್ಧೆಗಳಲ್ಲಿ ಕೊಂಡೊಯ್ಯುವಂತೆ ಮಾಡುವಲ್ಲಿ ಅವರ ಪಾತ್ರವನ್ನ ಸ್ಮರಿಸಿದರು.
ಶಿಕ್ಷಕರಾದ ಸುರೇಶ ನಾಯ್ಕ, ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಪ್ರೀತಿ ಪಿ. ಬೋರಗಾಂವಕರ, ನಿವೃತ್ತ ಮುಖ್ಯ ಶಿಕ್ಷಕರಾದ ನಿತ್ಯಾನಂದ ಆರ್. ನಾಯ್ಕ , ನಿವೃತ್ತ ಅಧೀಕ್ಷಕರಾದ ಪ್ರಭಾಕರ ಕೆ.ನಾಯ್ಕ, ಇನ್ನೋರ್ವ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಾರುತಿ ನಾಯ್ಕ , ಮೋಹನ್ ಖಾರ್ವಿ, ಇನ್ನಿತರರು ಉಪಸ್ಥಿತರಿದ್ದರು. ಗಣೇಶ ವಿ . ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೃತಜ್ಞತಾ ನುಡಿಯನ್ನು ಮಯೂರ ನಾಯ್ಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅನೇಕ ಶಿಕ್ಷಕರು, ಸಾಹಿತ್ಯಾಸಕ್ತರು, ಬಂಧು-ಬಳಗ, ಕುಟುಂಬ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದಿವಂಗತರಿಗೆ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮವು ಸ್ಮರಣೀಯ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.


