ಕಾರವಾರ : ತಮ್ಮ ದೀರ್ಘಕಾಲದ ಮತ್ತು ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸೇವಾ ಅಭಿವೃದ್ಧಿ ಸಂಘದ ಕರೆಯ ಮೇರೆಗೆ, ಉತ್ತರ ಕನ್ನಡ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಗ್ರಾಮ ಪಂಚಾಯಿತಿ ನೌಕರರು ಸೆಪ್ಟೆಂಬರ್ 21ರಿಂದ ‘ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ’ ನಡೆಸಲು ನಿರ್ಧರಿಸಿದ್ದಾರೆ. ಮುಂಬರುವ ಈ ಹೋರಾಟಕ್ಕೆ ಬೆಂಬಲ ಹಾಗೂ ಸಹಕಾರ ಕೋರಿ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ಮನವಿ ಸಲ್ಲಿಸಲಾಗಿದೆ.
ಸಂಘವು ಸರ್ಕಾರದ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಇದುವರೆಗೂ ಸಮರ್ಪಕವಾಗಿ ಈಡೇರದ ಹಿನ್ನೆಲೆಯಲ್ಲಿ, ರಾಜ್ಯಮಟ್ಟದಲ್ಲಿ ಎಲ್ಲಾ ಜಿಲ್ಲಾ ಘಟಕಗಳ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಂಘದ ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ್, ಗೌರವಾಧ್ಯಕ್ಷರಾದ ಮಂಜುನಾಥ ಟಿ.ಸಿ., ರಾಜ್ಯ ಪರಿಷತ್ ಸದಸ್ಯ ಅಣ್ಣಪ್ಪ ಮುಕ್ರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಿರೀಶ್ ತಳವಾರ್, ಕ್ರೀಡಾ ಕಾರ್ಯದರ್ಶಿ ನವೀನ್ ನಾಯ್ಕ, ಕಾರವಾರ ತಾಲೂಕು ಅಧ್ಯಕ್ಷೆ ಪ್ರಭಾವತಿ ಬಂಟ್ ಹಾಗೂ ಪಿಡಿಒ ಮದುರಾ ಸೇರಿದಂತೆ ಪ್ರಮುಖ ಪದಾಧಿಕಾರಿಗಳ ನಿಯೋಗವು ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಅರ್ಪಿಸಿತು.

ಪ್ರಮುಖ ಬೇಡಿಕೆಗಳೇನು?: ಪಿಡಿಒ ಹುದ್ದೆಗಳ ಏಕಕಾಲಿಕ ಉನ್ನತೀಕರಣ ಹಾಗೂ ಜೇಷ್ಠತಾ ಪಟ್ಟಿಯಲ್ಲಿರುವ ಗೊಂದಲಗಳನ್ನು ನಿವಾರಿಸಿ ಶೀಘ್ರ ಬಡ್ತಿ ನೀಡಬೇಕು ಎಂಬುದು ಅಧಿಕಾರಿಗಳ ಪ್ರಮುಖ ಬೇಡಿಕೆಯಾಗಿದೆ. ಇದರೊಂದಿಗೆ, ಗ್ರಾ.ಪಂ.ಗಳಿಗೆ ಬಾಕಿ ಇರುವ ಅನುದಾನದ ಶೀಘ್ರ ಬಿಡುಗಡೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಲಾಗಿದೆ. ಜನಸಂಖ್ಯೆ ಮತ್ತು ವ್ಯಾಪ್ತಿಯ ಆಧಾರದ ಮೇಲೆ ಪ್ರತಿ ಗ್ರಾಮ ಪಂಚಾಯಿತಿಗೆ ನೈರ್ಮಲ್ಯಕ್ಕೆ ₹10-15 ಲಕ್ಷ ಹಾಗೂ ಕುಡಿಯುವ ನೀರಿಗೆ ₹25-35 ಲಕ್ಷಗಳ ಪ್ರತ್ಯೇಕ ಅನುದಾನ ಒದಗಿಸುವುದು, ಖಾಲಿ ಇರುವ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಕಾಲಮಿತಿಯ ಶಾಶ್ವತ ವ್ಯವಸ್ಥೆ ರೂಪಿಸುವುದು ಹಾಗೂ ಇ-ಸ್ವತ್ತು ಸೇರಿದಂತೆ ವಿವಿಧ ತಂತ್ರಾಂಶಗಳಲ್ಲಿರುವ ದೋಷಗಳನ್ನು ನಿವಾರಿಸಬೇಕು ಎಂದು ಸಂಘವು ಒತ್ತಾಯಿಸಿದೆ. ಅಲ್ಲದೆ, ಅನ್ಯ ಇಲಾಖೆಗಳ ಕೆಲಸದ ಒತ್ತಡದಿಂದ ಪಿಡಿಒಗಳನ್ನು ಮುಕ್ತಗೊಳಿಸಬೇಕು ಎಂಬ ಆಗ್ರಹವೂ ಇದರಲ್ಲಿದೆ.
ಸೆ. 21 ರಿಂದ 23ರ ವರೆಗೆ ಜಿ.ಪಂ. ಎದುರು ಪ್ರತಿಭಟನೆ: ಸೆಪ್ಟೆಂಬರ್ 21ರಂದು ರಾಜ್ಯವ್ಯಾಪಿ ಅಸಹಕಾರ ಚಳುವಳಿ ಆರಂಭವಾಗಲಿದ್ದು, ಇದರ ಭಾಗವಾಗಿ ಸೆ. 21, 22 ಮತ್ತು 23ರಂದು (ಸೋಮವಾರ, ಮಂಗಳವಾರ, ಬುಧವಾರ) ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪಿಡಿಒಗಳು ಜಿಲ್ಲಾ ಪಂಚಾಯತ್ ಕಚೇರಿ ಆವರಣದ ಮುಂಭಾಗದಲ್ಲಿ ಜಿಲ್ಲಾ ಮಟ್ಟದ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ.

“ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆ – ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ” ಎಂಬ ಆಶಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಹಾಗೂ ಶಿಸ್ತುಬದ್ಧವಾಗಿ ಪಾಲ್ಗೊಂಡು ರಾಜ್ಯ ಸಂಘದ ನಿರ್ಣಯಕ್ಕೆ ಬೆಂಬಲ ಸೂಚಿಸಬೇಕು ಎಂದು ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


