ಪಂಚಾಯತ್ ಆಡಳಿತಕ್ಕೆ ಕಂಟಕವಾದ ತಾಂತ್ರಿಕ ದೋಷಗಳು: ಪರಿಹಾರಕ್ಕಾಗಿ ಸಿಇಒ ಮೊರೆ ಹೋದ ಅಧಿಕಾರಿಗಳು..!!

News Desk
1 Min Read

ಇಂದು ಉತ್ತರ ಕನ್ನಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್‌ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ, ಗ್ರಾಮ ಪಂಚಾಯಿತಿಗಳ ಆಡಳಿತ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ವಿಶೇಷವಾಗಿ ವಿಬಿಜಿ ಆರ್.ಎಂ.ಜಿ (VBG-RMG) ಯೋಜನೆಯ ಅನುಷ್ಠಾನದಲ್ಲಿ ಎದುರಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳು, ಗ್ರಾಮ ಪಂಚಾಯಿತಿಗಳಿಗೆ ಅನುದಾನದ ಕೊರತೆಯಿಂದ ಉಂಟಾಗಿರುವ ಅಭಿವೃದ್ಧಿ ಕಾರ್ಯಗಳ ಅಡಚಣೆಗಳು, ಹಾಗೂ ಇ-ಸ್ವತ್ತು (e-Swathu) ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವರವಾಗಿ ಗಮನ ಸೆಳೆಯಲಾಯಿತು.

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿಯನ್ನು ಸಕಾರಾತ್ಮಕವಾಗಿ ಪರಿಶೀಲಿಸಿ, ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಸಮಸ್ಯೆಗಳ ಗಂಭೀರತೆಯನ್ನು ಅರಿತು, ಸಂಬಂಧಿಸಿದ ವಿಷಯಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಅಲ್ಲದೆ, ಗ್ರಾಮ ಪಂಚಾಯಿತಿಗಳ ಆಡಳಿತ ಸುಗಮವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಮ್ಮಿಂದಾಗುವ ಎಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಉತ್ತರ ಕನ್ನಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತೋರಿದ ಸಕಾರಾತ್ಮಕ ಸ್ಪಂದನೆಗೆ ಸಂಘದ ಅಧ್ಯಕ್ಷರು ಹಾಗು ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು. ಈ ಸಭೆಯು ಗ್ರಾಮ ಪಂಚಾಯಿತಿಗಳ ಸಮಸ್ಯೆಗಳ ಪರಿಹಾರದ ದಿಸೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ ಎಂಬ ವಿಶ್ವಾಸವನ್ನು ಸಂಘ ವ್ಯಕ್ತಪಡಿಸಿತು.

Share This Article