ಅಂಕೋಲಾ: ಹೈವೇಯಲ್ಲಿ ಡೀಸೆಲ್ ಆಟ ಬಯಲು: ಹೆದ್ದಾರಿ ಪಕ್ಕ ಅಪಾಯಕಾರಿ ಸಂಗ್ರಹ, ಪ್ರಕರಣ ದಾಖಲು..

News Desk
1 Min Read

ಅಂಕೋಲಾ ತಾಲೂಕಿನ ರಾಮನಗುಳಿ ದುಗ್ಗನಬೈಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಡೀಸೆಲ್ ಸಂಗ್ರಹಿಸುತ್ತಿದ್ದ ಅಡ್ಡೆಯ ಮೇಲೆ ಅಂಕೋಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ರಾಮನಗುಳಿ ದುಗ್ಗನಬೈಲ್ ನಿವಾಸಿ ಹಾಗೂ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುವ ಚಂದ್ರಶೇಖರ್ ತಂದೆ ಪಾಂಡುರಂಗ ನಾಯ್ಕ (37) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 14ರಂದು ಮುಂಜಾನೆ 1:45ರ ಸುಮಾರಿಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಆರೋಪಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಯಾವುದೇ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳಿಲ್ಲದೆ, ಅತ್ಯಂತ ಅಪಾಯಕಾರಿ ದಹ್ಯ ವಸ್ತುವಾದ ಡೀಸೆಲ್ ಅನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದನು. ಅಲ್ಲದೆ, ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಪಡೆಯದೆ, ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಇಂಧನವನ್ನು ತನ್ನ ವಶದಲ್ಲಿ ಶೇಖರಿಸಿಟ್ಟಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾನೂನು ಮತ್ತು ಸುವ್ಯವಸ್ಥೆ) ಗುರುನಾಥ ಹಾದಿಮನಿ ಅವರು ಖುದ್ದಾಗಿ ಈ ಕಾರ್ಯಾಚರಣೆ ನಡೆಸಿದ್ದು, ಸ್ಥಳದಲ್ಲಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿದ್ದ 2000 ರೂ. ಮೌಲ್ಯದ 20 ಲೀಟರ್ ಡೀಸೆಲ್ ತುಂಬಿದ್ದ ಕಪ್ಪು ಬಣ್ಣದ ಕ್ಯಾನ್, 1000 ರೂ. ಮೌಲ್ಯದ 10 ಲೀಟರ್ ಡೀಸೆಲ್ ಇದ್ದ ಬಿಳಿ ಬಣ್ಣದ ಕ್ಯಾನ್, ಡೀಸೆಲ್ ಎಳೆಯಲು ಬಳಸಿದ್ದ ಹಸಿರು ಬಣ್ಣದ ಪ್ಲಾಸ್ಟಿಕ್ ಪೈಪ್, ಪಂಪ್ ಮೋಟಾರ್ ಹಾಗೂ ಅರ್ಧ ಕತ್ತರಿಸಿದ ಕ್ಯಾನ್ ಸೇರಿದಂತೆ ಒಟ್ಟು 3,500 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಆರೋಪಿಯ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಹೊಸ ಕಾನೂನು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 287ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article