ಅಂಕೋಲಾದ ಅಚವೆ ಗ್ರಾಮದಲ್ಲಿ ಮಗಳ ಮನೆಯಿಂದ ಹೊರಟಿದ್ದ ವೃದ್ಧ ನಾಪತ್ತೆ..!!

News Desk
1 Min Read

ಅಂಕೋಲಾ: ತಾಲೂಕಿನ ಅಚವೆ ಗ್ರಾಮದ ಹೊಸಕೇರಿಯಲ್ಲಿ ವೃದ್ಧರೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಚವೆ ಗ್ರಾಮದ ಹೊಸಕೇರಿ ನಿವಾಸಿ ಗುಂಡು ಪೇಟು ಸಿದ್ದಿ (64) ಕಾಣೆಯಾದ ವ್ಯಕ್ತಿ.ಕಳೆದ ಸೆಪ್ಟೆಂಬರ್ 02 ರಂದು ಬೆಳಗ್ಗೆ 9:00 ಗಂಟೆಯ ಸುಮಾರಿಗೆ ಅಚವೆ ಗ್ರಾಮದ ಹೊಸಕೇರಿ ಯಲ್ಲಿರುವ ತಮ್ಮ ಮಗಳ ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಸ್ಸಾಗಿಲ್ಲ. ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಎಲ್ಲ ಕಡೆ ಹುಡುಕಾಡಿದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಹೀಗಾಗಿ ನಾಪತ್ತೆಯಾಗಿರುವ ತಮ್ಮ ತಂದೆಯನ್ನು ಹುಡುಕಿಕೊಡುವಂತೆ ಪುತ್ರ ನಾಗರಾಜ ಗುಂಡು ಸಿದ್ದಿ ಅವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/2026 ರಡಿ (ಗಂಡಸು ಕಾಣೆ) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.

ನಾಪತ್ತೆಯಾದವರ ಚಹರೆ ಗುರುತು: ಕಾಣೆಯಾದ ಗುಂಡು ಪೇಟು ಸಿದ್ದಿ ಅವರು ಸುಮಾರು 5 ಅಡಿ ಎತ್ತರವಿದ್ದು, ಕಪ್ಪು ಮೈಬಣ್ಣ, ದುಂಡು (ಗೋಲು) ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಇವರು ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಡುವಾಗ ನೀಲಿ ಬಿಳಿ ಗೆರಿಯ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಈ ಚಹರೆಯುಳ್ಳ ವ್ಯಕ್ತಿ ಎಲ್ಲಾದರೂ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಮಾಹಿತಿಗಾಗಿ ಅಂಕೋಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: (08388) 220333, ಮೊಬೈಲ್ ಸಂಖ್ಯೆ: 9480805250 / 9480805268 ಅಥವಾ ಇ-ಮೇಲ್: ankolakwr@ksp.gov.in ಅನ್ನು ಸಂಪರ್ಕಿಸಬಹುದಾಗಿದೆ.

Share This Article