ನಿರಂತರ ವಿದ್ಯುತ್ ಕಡಿತ, ಶಾಲಾ ರಸ್ತೆಗಳಲ್ಲೇ ನೇತಾಡುತ್ತಿರುವ ಅಪಾಯಕಾರಿ ತಂತಿಗಳು :ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳಲು ಹೆಸ್ಕಾಂಗೆ ಕಡವಾಡ ಗ್ರಾಮಸ್ಥರ ಆಗ್ರಹ..

News Desk
1 Min Read

ಕಾರವಾರ: ತಾಲೂಕಿನ ಕಡವಾಡ ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಕಡಿತ ಹಾಗೂ ಗ್ರಾಮದ ವಿವಿಧೆಡೆ ಕೆಳಮಟ್ಟಕ್ಕೆ ವಾಲಿಕೊಂಡಿರುವ ಅಪಾಯಕಾರಿ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ತೀವ್ರ ಒತ್ತಾಯ ಹೇರಿದ್ದಾರೆ.

ಗೌರಿ-ಗಣೇಶ ಹಬ್ಬದಂತಹ ಸಡಗರದ ಸಂದರ್ಭದಲ್ಲಿಯೂ ಹೆಸ್ಕಾಂ ಅಘೋಷಿತ ವಿದ್ಯುತ್ ಕಡಿತ ಮಾಡಿದೆ. ಇದರಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಮನೆ ಹಾಗೂ ಅಂಗಡಿ-ಮುಂಗಟ್ಟುಗಳ ಫ್ರಿಡ್ಜ್‌ಗಳಲ್ಲಿಟ್ಟಿದ್ದ ಹಾಲು, ತರಕಾರಿ ಸೇರಿದಂತೆ ಇನ್ನಿತರ ದಿನಬಳಕೆಯ ಸಾಮಗ್ರಿಗಳು ವಿದ್ಯುತ್ ಇಲ್ಲದೆ ದಿನನಿತ್ಯ ಹಾಳಾಗುತ್ತಿವೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ ಗುನಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಶಾಂಬಾವಾಡ, ಹಳೇಕೋಟೆ, ಕುಂಬಾರವಾಡ, ಗುನಗಿವಾಡಕ್ಕೆ ಹೋಗುವ ರಸ್ತೆಗಳು ಹಾಗೂ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟಕ್ಕೆ ವಾಲಿಕೊಂಡಿವೆ. ಈ ನಿರ್ಲಕ್ಷ್ಯದಿಂದ ಅನಾಹುತಗಳು ಸಂಭವಿಸುವ ಸಾಧ್ಯತೆಯಿದ್ದು, ಪ್ರಾಣಹಾನಿ ಎದುರಾಗುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕಿಶೋರ ಕಡವಾಡಕರ ಆಗ್ರಹಿಸಿದರು.

ಇದೇ ವೇಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ ಅವರು ಗ್ರಾಮದಲ್ಲಿರುವ ಇತರ ವಿದ್ಯುತ್ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ತ್ವರಿತ ಪರಿಹಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹುತಾತ್ಮ ವೀರ ಯೋಧ ವಿನೋದ ನಾಯ್ಕ ಅವರ ತಂದೆ ಮಹಾದೇವ ಡಿ. ನಾಯ್ಕ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ ಗುನಗಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ, ಮಾಜಿ ಸದಸ್ಯ ಕಿಶೋರ ಕಡವಾಡಕರ ಹಾಗೂ ಪ್ರಮುಖರಾದ ಪ್ರದೀಪ ಕಡವಾಡಕರ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article