ಅಂಕೋಲಾ: ತಾಲೂಕಿನ ಬೊಬ್ರುವಾಡದ ನದಿಭಾಗ ಸಮುದ್ರ ತೀರದಲ್ಲಿ ಸಾರ್ವಜನಿಕವಾಗಿ ಗಾಂಜಾ (ಮಾದಕ ವಸ್ತು) ಸೇವನೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯಲಾದ ಆರೋಪಿಯನ್ನು ಶಿರಗುಂಜಿ ಗ್ರಾಮದ ಬಲಿಗದ್ದೆ ನಿವಾಸಿ, 48 ವರ್ಷದ ರೈತ ಯಂಕು ರೋಮು ಗೌಡ ಎಂದು ಗುರುತಿಸಲಾಗಿದೆ.
ಶನಿವಾರ (ಅ. 10) ಸಂಜೆ ಸುಮಾರು 6:50ರ ಹೊತ್ತಿಗೆ ಅಂಕೋಲಾ ಪೊಲೀಸ್ ಠಾಣೆಯ ಉಪ-ನಿರೀಕ್ಷಕ (ಪಿಎಸ್‌ಐ) ಗುರುನಾಥ ಹಾದಿಮನಿ ಅವರು ಗಸ್ತಿನಲ್ಲಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನದಿಭಾಗ ಕಡಲತೀರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಯಂಕು ಗೌಡ ಮಾದಕ ವಸ್ತು ಸೇವನೆ ಮಾಡಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಿದ್ದ.
ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಬಾಯಿಯಿಂದ ಯಾವುದೋ ಘಾಟು ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಆತನನ್ನು ತಕ್ಷಣವೇ ಅಂಕೋಲಾ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಾಧಿಕಾರಿಗಳ ವರದಿಯಲ್ಲಿ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985 (NDPS Act, U/S 27(b)) ಅಡಿಯಲ್ಲಿ ಪಿಎಸ್‌ಐ ಗುರುನಾಥ ಹಾದಿಮನಿ ಅವರು ಸರ್ಕಾರದ ಪರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ..


