ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಯ ಉಳಿಸುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ ಆತಂಕಕಾರಿ ಬೆಳವಣಿಗೆಯೊಂದು ಅಂಕೋಲಾ ತಾಲೂಕಿನಾದ್ಯಂತ ಕಂಡುಬರುತ್ತಿದೆ.
ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ನಿಗದಿತ ‘ಯು-ಟರ್ನ್’ ಬಳಸುವ ಬದಲು, ಅಡ್ಡಾದಿಡ್ಡಿಯಾಗಿ ರಸ್ತೆ ದಿವೈಡರ್ ಗಳನ್ನು ದಾಟುತ್ತಿರುವುದು ಇಲ್ಲಿ ನಿತ್ಯದ ದೃಶ್ಯವಾಗಿದೆ. ಈ ಹಿಂದೆ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಇವೆ. ಮುಂದೆಯೂ ಸವಾರರ ಈ ಮಿತಿಮೀರಿದ ನಿರ್ಲಕ್ಷ್ಯದಿಂದಾಗಿ ಹೆದ್ದಾರಿಯಲ್ಲಿ ಭಾರಿ ಅಪಘಾತಗಳಾಗುವ ಸಾಧ್ಯತೆಗಳು ದಟ್ಟವಾಗಿವೆ.
ತಾಲೂಕಿನ ಮೂಲಕ ಹಾದುಹೋಗುವ ಚತುಷ್ಪಥ ಹೆದ್ದಾರಿಯಲ್ಲಿ ವಾಹನಗಳು ಹಗಲಿರುಳು ಅತಿ ವೇಗವಾಗಿ ಸಂಚರಿಸುತ್ತವೆ. ಆದರೆ, ಕೆಲವು ಬೈಕ್ ಸವಾರರು ಸ್ವಲ್ಪ ದೂರ ಕ್ರಮಿಸಿ ಸುರಕ್ಷಿತವಾಗಿ ಯು-ಟರ್ನ್ ತೆಗೆದುಕೊಳ್ಳುವ ಬದಲು, ಶಾರ್ಟ್-ಕಟ್ ಹುಡುಕಿಕೊಂಡು ಡಿವೈಡರ್ ನಡುವಿನ ಅನಧಿಕೃತ ಜಾಗಗಳಲ್ಲಿ ವಾಹನಗಳನ್ನು ನುಗ್ಗಿಸುತ್ತಿದ್ದಾರೆ. ದಿಢೀರನೆ ಬೈಕ್‌ಗಳು ಹೆದ್ದಾರಿಗೆ ಅಡ್ಡಲಾಗಿ ಬರುವುದರಿಂದ, ಅತಿ ವೇಗವಾಗಿ ಬರುವ ಲಾರಿ, ಬಸ್ಸು ಮತ್ತು ಕಾರು ಚಾಲಕರಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಭೀಕರ ಅಪಘಾತಗಳು ಸಂಭವಿಸುವ ಅಪಾಯ ಎದುರಾಗಿದೆ.

ಸವಾರರ ಈ ಅವೈಜ್ಞಾನಿಕ ಮತ್ತು ಅಶಿಸ್ತಿನ ಚಾಲನೆ ಕೇವಲ ಅವರ ಜೀವಕ್ಕೆ ಮಾತ್ರವಲ್ಲ, ಇತರ ಅಮಾಯಕ ಪ್ರಯಾಣಿಕರ ಪ್ರಾಣಕ್ಕೂ ಕುತ್ತು ತರುತ್ತಿದೆ. ಡಿವೈಡರ್ ನಡುವೆ ಇರುವ ಅನಗತ್ಯ ಹಾಗೂ ವಾಹನಗಳು ನುಗ್ಗಲು ಅವಕಾಶವಿರುವ ಅನಧಿಕೃತ ಅಂತರಗಳನ್ನು ಮುಚ್ಚುವ ಕೆಲಸ ತುರ್ತಾಗಿ ಆಗಬೇಕಿದೆ. ಜೊತೆಗೆ, ನಿಯಮ ಉಲ್ಲಂಘಿಸುವ ಸವಾರರಿಗೆ ದಂಡದ ಬಿಸಿ ಮುಟ್ಟಿಸುವ ಅಗತ್ಯವಿದೆ.
ಸಂಬಂಧಪಟ್ಟ ಪ್ರಾಧಿಕಾರ ಮತ್ತು ಇಲಾಖಾ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಹೆದ್ದಾರಿ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಹಾಗೆಯೇ, ವಾಹನ ಸವಾರರು ಕೂಡ “ವೇಗಕ್ಕಿಂತ ಪ್ರಾಣ ಅಮೂಲ್ಯ” ಎಂಬುದನ್ನು ಅರಿತು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ, ಮುಂಬರುವ ದಿನಗಳಲ್ಲಿ ಈ ಹೆದ್ದಾರಿಯ ‘ಶಾರ್ಟ್-ಕಟ್’ಗಳು ಮತ್ತಷ್ಟು ಅಮಾಯಕರ ಪ್ರಾಣ ಬಲಿ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.



