ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಜ್ಯಾದ್ಯಂತ ಒಟ್ಟು 40 ವಲಯ ಅರಣ್ಯಾಧಿಕಾರಿಗಳನ್ನು (ಆರ್‌ಎಫ್‌ಒ) ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 15, 2026ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಈ ಕಛೇರಿ ಆದೇಶವನ್ನು ಹೊರಡಿಸಿದ್ದು, ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅದಲು-ಬದಲು
ಒಟ್ಟು 40 ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಯಾದ ಉತ್ತರ ಕನ್ನಡದ ಪಾಲು ದೊಡ್ಡದಿದೆ. ಅಂಕೋಲಾ ಕಾರವಾರ, ಹೊನ್ನಾವರ, ಶಿರಸಿ, ಯಲ್ಲಾಪುರ, ದಾಂಡೇಲಿ ಹಾಗೂ ಹಳಿಯಾಳ ವಿಭಾಗಗಳ ಬಹುತೇಕ ವಲಯ ಅರಣ್ಯಾಧಿಕಾರಿಗಳನ್ನು ಆಂತರಿಕವಾಗಿ ಹಾಗೂ ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.ಈ ವರ್ಗಾವಣೆ ಆದೇಶದಲ್ಲಿ 40 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಆದೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಶಿರಸಿ, ಯಲ್ಲಾಪುರ, ದಾಂಡೇಲಿ ಹಾಗೂ ಹಳಿಯಾಳ ವಿಭಾಗಗಳಲ್ಲಿ ಗಣನೀಯ ಪ್ರಮಾಣದ ಬದಲಾವಣೆಗಳಾಗಿವೆ.

ಕಾರವಾರ ಮತ್ತು ಹೊನ್ನಾವರ ವಿಭಾಗದಲ್ಲಿ ಕತಗಾಲ ವಲಯದಲ್ಲಿದ್ದ ಶ್ರೀಮತಿ ಪ್ರೀತಿ ರಾಮದಾಸ ನಾಯ್ಕ ಅವರನ್ನು ಹೊನ್ನಾವರ ಸಾಮಾಜಿಕ ಅರಣ್ಯ ವಲಯಕ್ಕೆ ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಎಸ್. ವಿ ಬಂಟ್ ಅವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಲಾಗಿದೆ. ಕಾರವಾರ ವಿಭಾಗದ ರಾಮನಗುಳಿಯಲ್ಲಿದ್ದ ಶ್ರೀ ಸುರೇಶ್ ಆರ್. ನಾಯ್ಕ ಅವರನ್ನು ಹಿರೇಗುತ್ತಿಗೆ, ಅಂಕೋಲಾದ ಶ್ರೀ ಪ್ರಮೋದ ನಾಯಕ ಅವರನ್ನು ಹೊನ್ನಾವರ ವಲಯಕ್ಕೆ ಮತ್ತು ಹೊನ್ನಾವರದ ಶ್ರೀಮತಿ ಸವಿತಾ ಆರ್. ದೇವಾಡಿಗ ಅವರನ್ನು ಕುಮಟಾ ವಲಯಕ್ಕೆ ಸ್ಥಳಾಂತರಿಸಲಾಗಿದೆ.
ಶಿರಸಿ ಹಾಗೂ ಯಲ್ಲಾಪುರ ವಿಭಾಗಗಳಲ್ಲೂ ಹಲವು ಅಧಿಕಾರಿಗಳ ಸ್ಥಾನ ಪಲ್ಲಟವಾಗಿದೆ. ಗೇರಸೊಪ್ಪದಿಂದ ಶ್ರೀ ಕಾರ್ತಿಕ್ ಎಸ್ ಕಾಂಬ್ಳೆ ಅವರನ್ನು ಬನವಾಸಿಗೆ, ಜಾನ್ಮನದ ಶ್ರೀಮತಿ ಉಷಾ ಕರ್ ಅವರನ್ನು ಸಿದ್ದಾಪುರಕ್ಕೆ, ಬನವಾಸಿಯ ಶ್ರೀಮತಿ ಭವ್ಯ ನಾಯ್ಕ ಅವರನ್ನು ಶಿರಸಿಗೆ, ಶಿರಸಿಯ ಶ್ರೀ ಗಿರೀಶ್ ಲಕ್ಷ್ಮಣ ನಾಯ್ಕ ಅವರನ್ನು ಹುಲೇಕಲ್‌ಗೆ ಹಾಗೂ ಹುಲೇಕಲ್‌ನ ಶ್ರೀ ಶಿವಾನಂದ ಎಸ್ ನಿಂಗಾಣಿ ಅವರನ್ನು ಕ್ಯಾದಗಿ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಯಲ್ಲಾಪುರ ವಿಭಾಗದಲ್ಲಿ, ಶಿರಸಿ ಸಾಮಾಜಿಕ ಅರಣ್ಯ ವಲಯದ ಶ್ರೀ ಮಾರುತಿ ಟಿ. ನಾಯ್ಕ ಅವರು ಮಂಚಿಕೇರಿಗೆ, ಮಂಚಿಕೇರಿಯ ಶ್ರೀ ಬಸವರಾಜ ಎಸ್ ಬೋಚಳ್ಳಿ ಅವರು ಇಡಗುಂದಿಗೆ ಹಾಗೂ ಇಡಗುಂದಿಯ ಶ್ರೀ ಮಂಜುನಾಥ್ ಹೆಚ್ ನಾಯ್ಕ ಅವರು ಯಲ್ಲಾಪುರ ವಲಯಕ್ಕೆ ನಿಯುಕ್ತಿಗೊಂಡಿದ್ದಾರೆ.

ದಾಂಡೇಲಿ ಹಾಗೂ ಹಳಿಯಾಳ ಭಾಗದಲ್ಲಿ ಕುಮಟಾದಲ್ಲಿದ್ದ ಶ್ರೀ ಪ್ರವೀಣ ಆರ್. ನಾಯಕ ಅವರು ದಾಂಡೇಲಿಯ ಸರ್ಕಾರಿ ನಾಟಾ ಸಂಗ್ರಹಾಲಯಕ್ಕೆ, ದಾಂಡೇಲಿಯ ಶ್ರೀ ಎನ್.ಎಲ್. ನದಾಫ್ ಹಳಿಯಾಳಕ್ಕೆ, ಹಳಿಯಾಳದ ಶ್ರೀ ಬಸವರಾಜ್ ಎಂ. ಕೆ.ಟಿ.ಆರ್ ದಾಂಡೇಲಿಯ ಪಣಸೋಲಿಗೆ ಮತ್ತು ಪಣಸೋಲಿಯ ಶ್ರೀ ರವಿಕಿರಣ ಎಮ್ ಸಂಪಗಾವಿ ಅವರನ್ನು ಹಳಿಯಾಳದ ಜೋಯಿಡಾ ವಲಯಕ್ಕೆ ವರ್ಗಾಯಿಸಲಾಗಿದೆ. ಇವರಲ್ಲದೆ, ಸಿದ್ದಾಪುರ ವಲಯದ ಶ್ರೀ ಅಜಯ್ ಕುಮಾರ್ ಎಂ.ಎಸ್. ಅವರು ಸಾಗರ ವಿಭಾಗದ ಲೀಗಲ್ & ಐಸಿಟಿ ವಿಭಾಗಕ್ಕೆ ಮತ್ತು ಯಲ್ಲಾಪುರದ ಶ್ರೀ ಜಿ.ವಿ. ನರೇಶ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆನೆ ಕಾರ್ಯಪಡೆಗೆ ವರ್ಗಾವಣೆಗೊಂಡು ಜಿಲ್ಲೆಯಿಂದ ನಿರ್ಗಮಿಸಿದ್ದಾರೆ.
ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣವೇ ನಿಯೋಜಿತ ಹುದ್ದೆಗೆ ಕಾರ್ಯವರದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.


