‘ಚುನಾವಣೆಗೆ ಸ್ಪರ್ಧಿಸದಂತೆ ಕ್ರಿಮಿನಲ್ ಕೇಸ್ ಹಾಕುತ್ತೇವೆ’: ಕಾಂಪೌಂಡ್ ಗಲಾಟೆ ವೇಳೆ ಬೆದರಿಕೆ ಹಾಕಿದ ಗಂಭೀರ ಆರೋಪ..

News Desk
2 Min Read

ಕುಮಟಾ ತಾಲೂಕಿನ ಅಘನಾಶಿನಿಯಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಮೂವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ – (ಅಪರಾಧ ಸಂಖ್ಯೆ: 162/2026) ದಾಖಲಾಗಿದೆ.

ಅಘನಾಶಿನಿ ನಿವಾಸಿ, ಪ್ರಶಾಂತ್ ಗೋಪಾಲ್ ನಾಯ್ಕ್ (48) ಅವರು ದಿನಾಂಕ 11-08-2026 ರಂದು ನೀಡಿದ ದೂರಿನ ಆಧಾರದ ಮೇಲೆ, ಸತೀಶ್ ಜಟ್ಟಿ, ಶ್ರೀದೇವಿ ಸತೀಶ್ ಹಾಗೂ ಮಾದೇವ್ ಜಟ್ಟಿ ಎಂಬುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಕಾಯ್ದೆಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ, ದಿನಾಂಕ 09-08-2026 ರಂದು ಬೆಳಿಗ್ಗೆ 09:45 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಫಿರ್ಯಾದಿದಾರರಿಗೆ ಸೇರಿದ ಸಾಮೂಹಿಕ ಜಮೀನಿನ (ಸರ್ವೆ ನಂಬರ್ 279/2ಬ ಹಿಸ್ಸಾ ಅ) ಕಾಂಪೌಂಡ್ ಗೋಡೆಯನ್ನು ಆರೋಪಿತರು ಈ ಹಿಂದೆ ಕೆಡವಿದ್ದರು ಎನ್ನಲಾಗಿದೆ. ಇದರಿಂದಾಗಿ ಊರಿನ ದನಕರುಗಳು ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ, ಘಟನೆಯ ದಿನದಂದು ಫಿರ್ಯಾದಿ ಮತ್ತು ಅವರ ಕುಟುಂಬದವರು ಸದರಿ ಕಾಂಪೌಂಡ್ ಗೋಡೆಯನ್ನು ದುರಸ್ತಿ ಮಾಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಗೋಡೆ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ, ಏಕಾಏಕಿ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿತರು, “ತಮಗೆ ಕಾರು ಚಲಾಯಿಸಲು ಈ ಜಾಗ ಬೇಕು, ನೀವೇಕೆ ಇಲ್ಲಿ ಗೋಡೆ ಸರಿಪಡಿಸುತ್ತಿದ್ದೀರಿ” ಎಂದು ತಗಾದೆ ತೆಗೆದಿದ್ದಾರೆ. ಈ ಸಂದರ್ಭದಲ್ಲಿ 1ನೇ ಆರೋಪಿ ಸತೀಶ್ ಜಟ್ಟಿ ಎಂಬಾತ ಫಿರ್ಯಾದಿ ಹಾಗೂ ಅವರ ಕುಟುಂಬದವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ 2ನೇ ಆರೋಪಿ ಶ್ರೀದೇವಿ ಸತೀಶ್ ಅವರು, ಫಿರ್ಯಾದಿದಾರರ ಹಾಗು ಅವರ ಕುಟುಂಬದ ವಿರುದ್ಧ ದಲಿತ ದೌರ್ಜನ್ಯ ಮತ್ತು ಜಾತಿನಿಂದನೆ ಪ್ರಕರಣ ದಾಖಲಿಸಿ, ನೌಕರಿಯಿಂದ ತೆಗೆದುಹಾಕುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ, ಶಶಿಕುಮಾರ್ ಪಿ. ನಾಯ್ಕ್ ಎಂಬುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುವುದಾಗಿಯೂ ಬೆದರಿಸಿದ್ದಾರೆ ಎಂದು ವರದಿಯಾಗಿದೆ.

ಅಂತಿಮವಾಗಿ ಮೂವರೂ ಆರೋಪಿಗಳು ಸೇರಿ ಫಿರ್ಯಾದಿ ಮತ್ತು ಅವರ ಕುಟುಂಬದವರಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿತರು ಫಿರ್ಯಾದಿಯ ವಿರುದ್ಧ ಮುಂಚಿತವಾಗಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರಿಂದ, ಠಾಣೆಗೆ ಬಂದು ಈ ದೂರು ನೀಡಲು ವಿಳಂಬವಾಗಿದೆ ಎಂದು ಫಿರ್ಯಾದಿದಾರರು ಪೊಲೀಸರಿಗೆ ಕಾರಣ ನೀಡಿದ್ದಾರೆ. ಸದ್ಯ ಕುಮಟಾ ಪೊಲೀಸರು BNS 2023 ರ ಕಲಂ 329(3), 324(2), 352, 351(2), ಜೊತೆಗೆ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article