ಸಮಾಜಮುಖಿ ಚಿಂತಕರು, ದಲಿತ ಮುಖಂಡರು ಹಾಗೂ ಅಂಕೋಲಾ ಪುರಸಭೆಯ ಮಾಜಿ ಸದಸ್ಯರಾದ ಅಶೋಕ್ ಶೇಡಗೇರಿ ಅವರು ನಿನ್ನೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಸದಾ ಸತ್ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಇವರು, ಓರ್ವ ಆದರ್ಶ ರಾಜಕಾರಣಿ ಯಾಗಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂಬ ಮಹದಾಸೆ ಹೊಂದಿದ್ದ ಅವರು, ದಲಿತ ಹಾಗೂ ಶೋಷಿತ ವರ್ಗದ ಆಶಾಕಿರಣವಾಗಿ ಗುರುತಿಸಿಕೊಂಡಿದ್ದರು. ಪುರಸಭಾ ಸದಸ್ಯರಾಗಿದ್ದ ಅವಧಿಯಲ್ಲಿ ಜನಪರ ಕಾಳಜಿಯೊಂದಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಶಾಸಕರ ಅವಿರತ ಪ್ರಯತ್ನ ಹಾಗೂ ಸಂತಾಪ:
ಅಶೋಕ ಶೇಡಗೇರಿ ಅಕಾಲಿಕ ನಿಧನಕ್ಕೆ ಕ್ಷೇತ್ರದ ಮಾನ್ಯ ಶಾಸಕರಾದ ಸತೀಶ್ ಸೈಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದ್ದಾರೆ. ಅಶೋಕ್ ಶೇಡಗೇರಿ ಅವರು ಆರೋಗ್ಯದ ತೊಂದರೆಯಿಂದ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಗ, ಅವರ ಪ್ರಾಣರಕ್ಷಣೆಗಾಗಿ ಶಾಸಕರು ಅವಿರತ ಶ್ರಮಿಸಿದ್ದರು. ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಚಿಕಿತ್ಸೆಯ ಪ್ರತಿಯೊಂದು ಹಂತದ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದರು. ಆದರೆ, ವಿಧಿಯ ಲಿಖಿತದ ಮುಂದೆ ಆ ಎಲ್ಲಾ ಪ್ರಯತ್ನಗಳು ನಿರರ್ಥಕವಾಗಿವೆ.
“ಅಶೋಕ್ ಶೇಡಗೇರಿ ಅವರು ಕೇವಲ ಓರ್ವ ರಾಜಕಾರಣಿಯಾಗಿರದೆ, ಸಮಾಜದ ಶ್ರೇಯಸ್ಸಿಗಾಗಿ ಸದಾ ಮಿಡಿಯುತ್ತಿದ್ದ ಹೃದಯವಂತರಾಗಿದ್ದರು. ಅವರ ಅಗಲಿಕೆಯಿಂದ ಅಂಕೋಲಾ ತಾಲೂಕಿಗೆ ತುಂಬಲಾರದ ನಷ್ಟವುಂಟಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗಲಿ ಹಾಗೂ ಈ ಶೋಕವನ್ನು ಭರಿಸುವ ಅಗಾಧ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗದವರಿಗೆ ಕರುಣಿಸಲಿ”— ಮಾನ್ಯ ಶಾಸಕರು ತಮ್ಮ ಶೋಕ ಸಂದೇಶದಲ್ಲಿ ವ್ಯಕ್ತಪಡಿಸಿದ ಸಂತಾಪ.
ಅಶೋಕ್ ಶೇಡಗೇರಿ ಅವರ ನಿಧನದಿಂದ ಅಂಕೋಲಾ ತಾಲೂಕಿನ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಮರೆಯಲಾಗದ ಶೂನ್ಯ ಆವರಿಸಿದ್ದು, ಅಪಾರ ಬೆಂಬಲಿಗರು, ಹಿತೈಷಿಗಳು ಮತ್ತು ಬಂಧುಬಳಗವನ್ನು ಅವರು ಅಗಲಿದ್ದಾರೆ. ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳಲು ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತೇವೆ..


