ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಕೇಂದ್ರದ ಅಧಿಕೃತ ಮುದ್ರೆ: ಅಂಕೋಲಾದ ಈ 16 ಹಳ್ಳಿಗಳ ಮೂಲಕ ಹಾದುಹೋಗಲಿದೆ ನೂತನ ಬ್ರಾಡ್ ಗೇಜ್ ಮಾರ್ಗ..

News Desk
2 Min Read

ದಶಕಗಳಿಂದ ಬಾರಿ ಚರ್ಚೆಯಲ್ಲಿದ್ದ ಆರ್ಥಿಕತೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ‘ಹುಬ್ಬಳ್ಳಿ-ಅಂಕೋಲಾ’ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು ಮಹತ್ವದ ಕಾನೂನಾತ್ಮಕ ಶಕ್ತಿ ಒದಗಿಸಿದೆ. ಭಾರತದ ರಾಜಪತ್ರದಲ್ಲಿ ಪ್ರಕಟಗೊಂಡ ಅಧಿಕೃತ ಅಧಿಸೂಚನೆಯನ್ವಯ, ಈ ಬಹುನಿರೀಕ್ಷಿತ ಮಾರ್ಗವನ್ನು “ವಿಶೇಷ ರೈಲ್ವೆ ಯೋಜನೆ” ಎಂದು ಘೋಷಿಸಲಾಗಿದೆ. 1989ರ ರೈಲ್ವೆ ಕಾಯ್ದೆಯ ಸೆಕ್ಷನ್ 2ರ ಉಪ-ಕಲಂ 37(ಎ) ಅಡಿಯಲ್ಲಿ ಪ್ರದತ್ತವಾದ ವಿಶೇಷ ಅಧಿಕಾರವನ್ನು ಚಲಾಯಿಸಿರುವ ರೈಲ್ವೆ ಸಚಿವಾಲಯವು, ಸಾರ್ವಜನಿಕ ಉದ್ದೇಶಕ್ಕಾಗಿ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದಲೇ ಜಾರಿಗೆ ಬಂದಿದ್ದು, ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆತಂತಾಗಿದೆ.

ನೈಋತ್ಯ ರೈಲ್ವೆಯ ನಿರ್ಮಾಣ ವಿಭಾಗವು ಕೈಗೆತ್ತಿಕೊಳ್ಳಲಿರುವ ಈ ಬೃಹತ್ ಯೋಜನೆಯು ಒಟ್ಟು 163.00 ಕಿಲೋಮೀಟರ್ ಉದ್ದದ ಹೊಸ ಬ್ರಾಡ್ ಗೇಜ್ ಜೋಡಿ ಮಾರ್ಗವನ್ನು ಒಳಗೊಂಡಿರುತ್ತದೆ, ಜೊತೆಗೆ ಸಂಪೂರ್ಣ ವಿದ್ಯುದೀಕರಣದ ಸೌಲಭ್ಯವನ್ನೂ ಹೊಂದಿರಲಿದೆ. ಈ ಮಹತ್ವಾಕಾಂಕ್ಷಿ ಕಾಮಗಾರಿಗಾಗಿ ಸರ್ಕಾರಿ, ಖಾಸಗಿ ಹಾಗೂ ಪರಿಸರ ಸೂಕ್ಷ್ಮ ಅರಣ್ಯ ಭೂಮಿಯನ್ನು ಸಹ ಬಳಸಿಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

‘ವಿಶೇಷ ಯೋಜನೆ’ಯ ಸ್ಥಾನಮಾನವು ಭೂಸ್ವಾಧೀನ ಪ್ರಕ್ರಿಯೆಗಳಲ್ಲಿನ ಕಾನೂನು ತೊಡಕುಗಳನ್ನು ನಿವಾರಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಅನುಷ್ಠಾನಗೊಳ್ಳಲು ಅಗತ್ಯವಾದ ಸುಗಮ ಹಾದಿಯನ್ನು ಸೃಷ್ಟಿಸಲಿದೆ.

ಈ ನೂತನ ರೈಲ್ವೆ ಯೋಜನೆಯು ನಾಲ್ಕು ತಾಲೂಕುಗಳ ಭೌಗೋಳಿಕ ವ್ಯಾಪ್ತಿಯನ್ನು ಆವರಿಸಲಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ 13 ಹಳ್ಳಿಗಳು ಮತ್ತು ಕಲಘಟಗಿಯ 16 ಹಳ್ಳಿಗಳ ಮೂಲಕ ಸಾಗುವ ಮಾರ್ಗವು, ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನಲ್ಲಿ ಅತ್ಯಧಿಕ 24 ಹಳ್ಳಿಗಳನ್ನು (ಹೊಸಳ್ಳಿ,ಕಿರವತ್ತಿ, ಕೊಲ್ಕೇರಿ, ರಾಮನಕೊಪ್ಪ, ಕನ್ನಡಗಲ್ , ಸಹಸ್ರಳ್ಳಿ, ಕೊಂಡೆ ಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪಡಮನೆ, ಹಿತ್ತಲಕರ ಗದ್ದೆ, ಇಡಗುಂದಿ, ಜೋಗದ ಮನೆ, ಕೊಮ್ಮಾಡಿ, ಅರಬೈಲ್, ತೆಲ್ಲಂಗಾರ, ವಜ್ರಳ್ಳಿ, ಹೊನ್ನ ಗದ್ದೆ, ಅಂಬಾ-ಗಾವ , ಗುಳ್ಳಾಪುರ, ಕೊಡ್ಲ ಗದ್ದೆ, ಕಳಚೆ, ಮಾವಿನ ಮನೆ ) ಸ್ಪರ್ಶಿಸಲಿದೆ.

ತದನಂತರ ಕರಾವಳಿಯ ಅಂಕೋಲಾ ತಾಲೂಕನ್ನು ಪ್ರವೇಶಿಸುವ ಈ ಮಾರ್ಗವು (ಸುಂಕಸಾಳ, ಕಟ್ಟಿನ ಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗರ ಮಕಿಗದ್ದೆ, ಅಡ್ಲೂರ, ನವಗದ್ದೆ, ಬೊಗ್ರಿ ಬೈಲ, ಅಲಗೇರಿ , ಶಿರಕುಳಿ, ಬಾಳೆಗುಳಿ, ಶೇಡಗೇರಿ, ಹೊಸಗದ್ದೆ, ಬೊಳೆ, ಅಂಕೋಲಾ ಸೇರಿದಂತೆ ಒಟ್ಟು 16 ಹಳ್ಳಿಗಳ ಮೂಲಕ ಹಾದುಬಂದು ಅಂಕೋಲಾವನ್ನು ತಲುಪಲಿದೆ.

Share This Article