ಅಂಕೋಲಾ: ನಡುರಸ್ತೆಯಲ್ಲಿ ಯುವತಿಯ ಅಡ್ಡಗಟ್ಟಿ ಹಲ್ಲೆ: ‘ನನ್ನ ಲವ್ ಮಾಡ್ಲಿಲ್ಲ ಅಂದ್ರೆ ಸಾಯ್ತೀನಿ’ ಎಂದು ಫೀನೈಲ್ ಕುಡಿದ ಯುವಕ : ಪ್ರಕರಣದ ದಾಖಲು..

News Desk
2 Min Read

ಅಂಕೋಲಾ ತಾಲೂಕಿನಲ್ಲಿ ಏಕಮುಖ ಪ್ರೇಮಿಯೊಬ್ಬನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಅಷ್ಟೇ ಅಲ್ಲದೆ, ತನ್ನನ್ನು ಪ್ರೀತಿಸದಿದ್ದರೆ ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದು ಬೆದರಿಸಿ ಆತ ಫೀನೈಲ ಕುಡಿದು ಹೈಡ್ರಾಮಾ ಸೃಷ್ಟಿಸಿದ್ದಾನೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಅಂಕೋಲಾದ ಮಾವಿನಕೇರಿ ನಿವಾಸಿ, 18 ವರ್ಷದ ವಿದ್ಯಾರ್ಥಿನಿ ದೂರು ನೀಡಿದ ನೊಂದ ಯುವತಿಯಾಗಿದ್ದಾಳೆ. ಅವರ್ಸಾ ಸಮೀಪದ ಸಕಲಬೇಣ ನಿವಾಸಿ ಪ್ರೀತಮ್ ನಾಯ್ಕ ಎಂಬಾತನೇ ಈ ಕೃತ್ಯವೆಸಗಿದವನು. ಕಳೆದ 2-3 ತಿಂಗಳುಗಳಿಂದ ಆರೋಪಿಯು ಯುವತಿಗೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಮತ್ತು ಮೆಸೇಜ್ ಮಾಡುವ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಆತನ ಎಲ್ಲ ನಂಬರ್‌ಗಳನ್ನು ಯುವತಿ ಬ್ಲಾಕ್ ಮಾಡಿದ್ದರೂ, ಜೂನ್ 22ರಂದು ಸಂಜೆ ಮತ್ತೊಂದು ನಂಬರ್‌ನಿಂದ ಕರೆ ಮಾಡಿದ್ದ ಆರೋಪಿ, ತನ್ನನ್ನು ಪ್ರೀತಿಸುವಂತೆ ಪೀಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಮನೆಗೆ ಬಂದು ಹೊಡೆಯುವುದಾಗಿ ಪ್ರಾಣಬೆದರಿಕೆ ಹಾಕಿದ್ದನು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆಗಸ್ಟ್ 6ರಂದು ಸಂಜೆ 6 ಗಂಟೆ ಸುಮಾರಿಗೆ ಯುವತಿ ತನ್ನ ಸ್ನೇಹಿತರೊಂದಿಗೆ ಮಾವಿನಕೇರಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ನಿಂತಿದ್ದ ಆರೋಪಿ ಪ್ರೀತಮ್ ಏಕಾಏಕಿ ಆಕೆಯನ್ನು ಅಡ್ಡಗಟ್ಟಿದ್ದಾನೆ. ಆಕೆಯ ಕೈ ಹಿಡಿದು ಎಳೆದಾಡಿ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ತನ್ನ ತಂದೆಗೆ ಕರೆ ಮಾಡುವಂತೆ ಜೊತೆಯಲ್ಲಿದ್ದ ಸ್ನೇಹಿತರಿಗೆ ತಿಳಿಸಿದಾಗ, ಕೋಪಗೊಂಡ ಆರೋಪಿಯು ಯುವತಿಯ ಕೆನ್ನೆಗೆ ಹಾಗೂ ಮೈಮೇಲೆ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿದ್ದಾನೆ. ಬಳಿಕ “ನೀನು ಲವ್ ಮಾಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ” ಎಂದು ಬೆದರಿಸಿ ತಂದಿದ್ದ ಫಿನಾಯಿಲ್ ಕುಡಿದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯಿಂದ ಆತಂಕಗೊಂಡಿದ್ದ ಯುವತಿ, ತನಗೆ ಮುಂದೆ ತೊಂದರೆಯಾಗಬಹುದೆಂದು ಕುಟುಂಬಸ್ಥರೊಂದಿಗೆ ಚರ್ಚಿಸಿದ ಬಳಿಕ ತನ್ನ ತಂದೆಯ ಜೊತೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಈ ದೂರಿನ ಅನ್ವಯ ಅಂಕೋಲಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023 ಕಾಯ್ದೆ ಅಡಿ (ಅಪರಾಧ ಸಂಖ್ಯೆ: 159/2026) ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article