ಮೌಖಿಕ ಆದೇಶಗಳಿಗೆ ಮಣಿಯದ ಅಧಿಕಾರಿಗಳು: ‘ವಿಬಿ-ಜಿ-ರಾಮ್-ಜಿ’ ಅವೈಜ್ಞಾನಿಕ ಗುರಿ ವಿರುದ್ಧ ಉತ್ತರ ಕನ್ನಡದಲ್ಲಿ ಆಡಳಿತಾತ್ಮಕ ಬಂಡಾಯ..

News Desk
2 Min Read

ಕಾರವಾರ(ಉ.ಕ): ಗ್ರಾಮೀಣಾಭಿವೃದ್ಧಿಯ ಮಹತ್ವಾಕಾಂಕ್ಷೆಯ ‘ವಿಬಿ-ಜಿ-ರಾಮ್-ಜಿ’ (VB-G-RAM-G) ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಮಿತಿಮೀರಿದ ಒತ್ತಡ ಹೇರಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನೈಜ ಉದ್ಯೋಗ ಬೇಡಿಕೆ ಇಲ್ಲದಿದ್ದರೂ ಕೃತಕವಾಗಿ ಬೇಡಿಕೆ ಸೃಷ್ಟಿಸಿ, ಕೆಲಸದ ದಾಖಲೆ ತೆರೆಯುವಂತೆ ಮೌಖಿಕವಾಗಿ ಹೇರುತ್ತಿರುವ ಒತ್ತಡವನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಿಯಮಬಾಹಿರ ಒತ್ತಡ ನಿಲ್ಲಿಸದಿದ್ದರೆ ಅಸಹಕಾರ ಚಳುವಳಿಯ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್ ನೇತೃತ್ವದಲ್ಲಿ, ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (CEO) ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. ಯೋಜನೆಯನ್ನು ಯಶಸ್ವಿಗೊಳಿಸುವ ಭರದಲ್ಲಿ ಅಧಿಕಾರಿಗಳ ಮೇಲೆ ಅವೈಜ್ಞಾನಿಕ ಗುರಿಗಳನ್ನು ನಿಗದಿಪಡಿಸಲಾಗುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಗಂಭೀರ ಸಮಸ್ಯೆಗೆ ಆಗಸ್ಟ್ 17ರ ಒಳಗೆ ಸೂಕ್ತ ಪರಿಹಾರ ದೊರೆಯದಿದ್ದರೆ, ರಾಜ್ಯ ಸಂಘದ ನಿರ್ಣಯದಂತೆ ಮುಂದಿನ ಹಂತದಲ್ಲಿ ಆಡಳಿತ ಯಂತ್ರದ ವಿರುದ್ಧ ‘ಸಂಪೂರ್ಣ ಅಸಹಕಾರ’ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಆಡಳಿತ ವ್ಯವಸ್ಥೆಗೆ ಕಟ್ಟುನಿಟ್ಟಿನ ಗಡುವು ನೀಡಲಾಗಿದೆ.

ಗ್ರಾಮೀಣ ಜನತೆಗೆ ಉದ್ಯೋಗ ಕಲ್ಪಿಸುವ ಸರ್ಕಾರದ ಮೂಲ ಉದ್ದೇಶಕ್ಕೆ ಪಿಡಿಒಗಳ ಯಾವುದೇ ವಿರೋಧವಿಲ್ಲ. ಸಾರ್ವಜನಿಕರಿಗೆ ಉದ್ಯೋಗ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯೂ ಹೌದು. ಆದರೆ, ವಾಸ್ತವಿಕ ನೆಲೆಗಟ್ಟಿನಲ್ಲಿ ನೈಜ ಬೇಡಿಕೆ ಇಲ್ಲದಿದ್ದಾಗಲೂ ಕೇವಲ ಅಂಕಿ-ಅಂಶಗಳಿಗಾಗಿ ಕೃತಕ ಬೇಡಿಕೆ ಸೃಷ್ಟಿಸುವ ಪ್ರವೃತ್ತಿ ನಿಯಮಬದ್ಧ ಆಡಳಿತಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಯಾವುದೇ ಹೊಸ ಯೋಜನೆಯ ಅನುಷ್ಠಾನಕ್ಕೆ ಸ್ಪಷ್ಟವಾದ ತಾಂತ್ರಿಕ ಹಾಗೂ ಆಡಳಿತಾತ್ಮಕ ಮಾರ್ಗಸೂಚಿಗಳು ಅತ್ಯಗತ್ಯ. ನಿಯಮಾನುಸಾರವಾಗಿ ನಡೆಯುವ ಪ್ರತಿಯೊಂದು ಜನಪರ ಕಾರ್ಯಕ್ಕೂ ಪಿಡಿಒಗಳ ಸಂಪೂರ್ಣ ಬೆಂಬಲವಿರುತ್ತದೆ. ಆದರೆ, ನಿಯಮಗಳ ಚೌಕಟ್ಟನ್ನು ಮೀರಿ ಕೆಲಸ ಮಾಡಲು ಒತ್ತಡ ಹೇರಿದಲ್ಲಿ ಅಸಹಕಾರ ಅನಿವಾರ್ಯವಾಗಲಿದೆ ಎಂದು ಸಂಘವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಈ ಬಿಕ್ಕಟ್ಟಿನ ಶಮನಕ್ಕಾಗಿ ಸಂಘವು ಆಡಳಿತ ವರ್ಗದ ಮುಂದಿಟ್ಟಿರುವ ಬೇಡಿಕೆಗಳು ಸ್ಪಷ್ಟವಾಗಿವೆ. ನೈಜ ಬೇಡಿಕೆಯಿಲ್ಲದೆ ಎನ್‌ಎಂಆರ್ ತೆರೆಯುವಂತೆ ಹಾಗೂ ಕೃತಕ ಉದ್ಯೋಗ ಸೃಷ್ಟಿಸುವಂತೆ ಅಧಿಕಾರಿಗಳ ಮೇಲೆ ಹೇರಲಾಗುತ್ತಿರುವ ಮೌಖಿಕ ನಿರ್ದೇಶನಗಳನ್ನು ತಕ್ಷಣವೇ ಹಿಂಪಡೆಯಬೇಕು. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದ್ವಂದ್ವವಿಲ್ಲದ ಸ್ಪಷ್ಟ ಆಡಳಿತಾತ್ಮಕ ಮತ್ತು ತಾಂತ್ರಿಕ ಮಾರ್ಗಸೂಚಿಗಳನ್ನು ಕೂಡಲೇ ಪ್ರಕಟಿಸಬೇಕು. ಜೊತೆಗೆ, ಸ್ಪಷ್ಟ ಕಾರಣಗಳಿಲ್ಲದೆ ಅಧಿಕಾರಿಗಳ ದೈನಂದಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿರುವ ಅನಿಯಮಿತ ವಿಡಿಯೋ ಸಂವಾದಗಳನ್ನು ಕೈಬಿಡಬೇಕು ಮತ್ತು ವಾಸ್ತವಿಕ ಬೇಡಿಕೆಯ ಆಧಾರದ ಮೇಲೆ ಕೆಲಸ ಮಾಡಲು ಪಿಡಿಒಗಳಿಗೆ ಮುಕ್ತ ಆಡಳಿತಾತ್ಮಕ ಸ್ವಾತಂತ್ರ್ಯ ನೀಡಬೇಕು ಎಂದು ಆಗ್ರಹಿಸಲಾಗಿದೆ.

ಜಿಲ್ಲಾ ಪಂಚಾಯಿತ ಸಿಇಒ ಅವರು ಸದಾ ಅಧಿಕಾರಿಗಳ ಪರವಾಗಿ ನಿಂತು ವಾಸ್ತವಿಕ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ವಿಶ್ವಾಸವಿದ್ದು, ಶೀಘ್ರದಲ್ಲೇ ಈ ಬಿಕ್ಕಟ್ಟಿಗೆ ನಿಯಮಾನುಸಾರ ಪರಿಹಾರ ದೊರಕಿಸಿಕೊಡಲಿದ್ದಾರೆ ಎಂಬ ಆಶಯವನ್ನು ಗಿರೀಶ್ ನಾಯಕ್ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ‌ ಪಂಚಾಯತ ಸಿಬ್ಬಂದಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು..

Share This Article