ಹೊನ್ನಾವರದ ಕಾಸರಕೋಡು ಟೊಂಕದಲ್ಲಿ ಆಕಸ್ಮಿಕ ಅಗ್ನಿ ಅವಘಡ; ಮೀನುಗಾರಿಕಾ ಬೋಟ್ ಬಹುಪಾಲು ಅಗ್ನಿಗಾಹುತಿ..

News Desk
1 Min Read

ಹೊನ್ನಾವರ: ತಾಲೂಕಿನ ಕಾಸರಕೋಡು ಟೊಂಕದ ಬಂದರಿನಲ್ಲಿ ಲಂಗರು ಹಾಕಿದ್ದ ಪರ್ಸಿನ್ ಬೋಟ್‌ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಹುಪಾಲು ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಅಗ್ನಿಗಾಹುತಿಯಾದ ಬೋಟ್ ಆಯುಬ್ ಸಾಬ್ ಎಂಬುವವರಿಗೆ ಸೇರಿದ್ದಾಗಿದೆ.

ಬಂದರಿನಲ್ಲಿ ಬೋಟ್ ಅನ್ನು ನಿಲ್ಲಿಸಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ವ್ಯಾಪಿಸಿದ ಬೆಂಕಿಯನ್ನು ಗಮನಿಸಿದ ಸ್ಥಳೀಯರು ಹಾಗೂ ಇತರ ಮೀನುಗಾರರು ತಕ್ಷಣವೇ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದಾಗ್ಯೂ, ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಬೋಟ್‌ನಲ್ಲಿದ್ದ ಬೆಲೆಬಾಳುವ ಮೀನುಗಾರಿಕಾ ಬಲೆಗಳು, ಯಂತ್ರೋಪಕರಣಗಳು ಹಾಗೂ ಬೋಟ್‌ನ ಬಹುಪಾಲು ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಬೆಂಕಿ ಇತರ ಬೋಟ್‌ಗಳಿಗೆ ವ್ಯಾಪಿಸುವುದು ತಪ್ಪಿದಂತಾಗಿದೆ. ಈ ಅಗ್ನಿ ಅವಘಡದಿಂದಾಗಿ ಬೋಟ್ ಮಾಲೀಕರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದ್ದು, ಮೀನುಗಾರಿಕಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಸೂಕ್ತ ಮೌಲ್ಯಮಾಪನ ಮಾಡಿದ ನಂತರವಷ್ಟೇ ನಿಖರವಾದ ನಷ್ಟದ ಅಂದಾಜು ಲಭ್ಯವಾಗಬೇಕಿದೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article