ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮದ ಸಾರ್ವಜನಿಕ ಸ್ಮಶಾನವು ಸಂಪೂರ್ಣವಾಗಿ ದುರವಸ್ಥೆಗೆ ತಲುಪಿದ್ದು, ಮೃತರ ಅಂತಿಮ ಸಂಸ್ಕಾರ ನೆರವೇರಿಸಲು ಬರುವ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯಕ್ಕೆ ಈ ಸ್ಮಶಾನವೇ ಜೀವಂತ ಸಾಕ್ಷಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಕಡವಾಡ ಸ್ಮಶಾನದಲ್ಲಿ ಶವ ದಹನ ಮಾಡುವ ಜಾಗದ ಕಬ್ಬಿಣದ ಕಂಬಗಳು ಹಾಗೂ ಸಲಾಕೆಗಳು ಸಂಪೂರ್ಣವಾಗಿ ತುಕ್ಕು ಹಿಡಿದು ಮುರಿದು ಬಿದ್ದಿವೆ. ಇದರಿಂದಾಗಿ ಶವ ಸಂಸ್ಕಾರ ಮಾಡುವ ವೇಳೆ ಮೃತದೇಹದ ಸುತ್ತ ಕಟ್ಟಿಗೆ ಹಾಗೂ ದೊಡ್ಡ ದೊಡ್ಡ ಕಲ್ಲುಗಳನ್ನು ಆಧಾರವಾಗಿ ಇಡಬೇಕಾದ ಹೀನಾಯ ಸ್ಥಿತಿ ನಿರ್ಮಾಣವಾಗಿದೆ. ಬದುಕಿದ್ದಾಗ ನೂರಾರು ಕಷ್ಟಗಳನ್ನು ಅನುಭವಿಸುವ ಮನುಷ್ಯನಿಗೆ, ಸತ್ತ ಮೇಲೂ ಸ್ಮಶಾನದಲ್ಲಿ ನೆಮ್ಮದಿಯ ಮುಕ್ತಿ ಸಿಗದಂತಹ ವಾತಾವರಣ ಸೃಷ್ಟಿಯಾಗಿದೆ.
ಇನ್ನು, ನಿರ್ಮಾಣ ಹಂತದಲ್ಲಿರುವ ನೂತನ ಚಿತಾಗಾರವು ಕಾಮಗಾರಿ ಪೂರ್ಣಗೊಳ್ಳದೆ, ಸೂರು ಇಲ್ಲದೆ ಅರ್ಧದಲ್ಲೇ ನೆನೆಗುದಿಗೆ ಬಿದ್ದಿದೆ. ಸ್ಮಶಾನದ ದುರಸ್ತಿಗಾಗಿ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ವ್ಯವಸ್ಥೆಯ ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತಿರುವ ಸ್ಥಳೀಯರೊಬ್ಬರು, ಶವ ಸಂಸ್ಕಾರದ ಜಾಗದಲ್ಲಿ ಕಬ್ಬಿಣದ ಕಂಬಗಳು ಮತ್ತು ಸಲಾಕೆಗಳನ್ನು ಅಳವಡಿಸಲು ಜನಸಾಮಾನ್ಯರ ಮನೆ-ಮನೆಗೆ ತೆರಳಿ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.
ಮೂಲಭೂತ ಸೌಕರ್ಯ ಕಲ್ಪಿಸಬೇಕಾದದ್ದು ಸರ್ಕಾರದ ಜವಾಬ್ದಾರಿಯಾಗಿದ್ದು, ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಅವಕಾಶ ನೀಡಬಾರದು ಎಂದು ಕೇಳಿ ಕೊಳ್ಳಲಾಗಿದೆ.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ಕಡವಾಡ ಸ್ಮಶಾನದ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಬೇಕು. ಅರ್ಧಕ್ಕೆ ನಿಂತಿರುವ ಚಿತಾಗಾರದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಕರವೇ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಅವರು ಆಗ್ರಹಿಸಿದ್ದಾರೆ.


