ಅಂಕೋಲಾ: ಸಾರ್ವಜನಿಕರ ಹಿತದೃಷ್ಟಿಯಿಂದ ಅಂಕೋಲಾದ ವಕೀಲರಾದ ಶ್ರೀ ಉಮೇಶ ನಾಯ್ಕ ಅವರು ಸಲ್ಲಿಸಿದ್ದ ಜವಾಬ್ದಾರಿಯುತ ಮನವಿಗೆ ಹಾಗು ಈ ಕುರಿತು ವಿಕಾಸ ವಾಹಿನಿ ಮಾಡಿದ ವರದಿಗೆ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿದೆ. ಇದರ ಫಲವಾಗಿ, ಬಹುಕಾಲದ ಬೇಡಿಕೆಯಾಗಿದ್ದ ಅಂಕೋಲಾ ಉಪನೋಂದಣಾಧಿಕಾರಿ ಕಛೇರಿಯು ಆಗಸ್ಟ್ 10 ರಂದು ಬೆಳಿಗ್ಗೆ 10:00 ಗಂಟೆಗೆ “ಪ್ರಜಾಸೌಧ” ತಹಶೀಲ್ದಾರ್ ಕಚೇರಿ ಎರಡನೇ ಮಹಡಿಗೆ ಅಧಿಕೃತವಾಗಿ ಸ್ಥಳಾಂತರಗೊಳ್ಳುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹಳೆಯ ಕಟ್ಟಡದ ಸಮಸ್ಯೆಗಳ ಕಿರುನೋಟ: ಈ ಹಿಂದೆ ಉಪನೋಂದಣಾಧಿಕಾರಿ ಕಛೇರಿಯು ಹಳೆಯ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡವು ತೀವ್ರ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ಸೋರುತ್ತಿತ್ತು. ಜೊತೆಗೆ, ಕಛೇರಿ ತಲುಪಲು 26 ಮೆಟ್ಟಿಲುಗಳನ್ನು ಹತ್ತಬೇಕಾಗಿದ್ದರಿಂದ ವಯೋವೃದ್ಧರು ಹಾಗೂ ವಿಕಲಚೇತನರು ತೀವ್ರ ಪರದಾಡುವಂತಾಗಿತ್ತು. ವಿದ್ಯುತ್ ಕಡಿತ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದರು. ಅಪರ ಜಿಲ್ಲಾಧಿಕಾರಿಗಳು ಈ ಹಿಂದೆಯೇ ಸ್ಥಳಾಂತರಕ್ಕೆ ಗಡುವು ನೀಡಿದ್ದರೂ, ಅಧಿಕಾರಿಗಳು ಸ್ಥಳಾಂತರಿಸುವಲ್ಲಿ ವಿಳಂಬ ಮಾಡಿದ್ದರು.

ಸಾರ್ವಜನಿಕರ ಈ ಭವಣೆಯನ್ನು ಅರಿತ ವಕೀಲ ಉಮೇಶ ನಾಯ್ಕ ಅವರು ಜುಲೈ 25 ರಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ವಿವರವಾದ ಮನವಿ ಸಲ್ಲಿಸಿದ್ದರು. ಜುಲೈ 26 ರಂದು ಈ ಕುರಿತು ‘ವಿಕಾಸ ವಾಹಿನಿ’ ಡಿಜಿಟಲ್ ನ್ಯೂಸ್‌ನಲ್ಲಿ ವರದಿ ಪ್ರಕಟವಾಗಿತ್ತು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ತಕ್ಷಣವೇ ಹಳೆಯ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಅವರು, ಆಡಳಿತ ಯಂತ್ರವನ್ನು ಚುರುಕುಗೊಳಿಸಿ, ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಕರ್ಯಗಳೊಂದಿಗೆ ಶರವೇಗದಲ್ಲಿ ಕಛೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ.
ನೂತನ ಕಛೇರಿಗೆ ಶುಭಾಶಯಗಳು: ಜನಸಾಮಾನ್ಯರ ಪರವಾಗಿ ದನಿ ಎತ್ತಿದ ವಕೀಲ ಉಮೇಶ ನಾಯ್ಕ ಅವರ ಸಾಮಾಜಿಕ ಕಳಕಳಿ ಹಾಗೂ ಅದಕ್ಕೆ ಅತ್ಯಂತ ಸಕಾರಾತ್ಮಕವಾಗಿ, ತ್ವರಿತವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಜಿಲ್ಲಾಡಳಿತದ ಈ ಜನಸ್ನೇಹಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸಕಲ ಸೌಕರ್ಯಗಳೊಂದಿಗೆ ನೂತನ ಕಟ್ಟಡದಲ್ಲಿ ಕಾರ್ಯಾರಂಭ ಮಾಡುತ್ತಿರುವ ಉಪನೋಂದಣಾಧಿಕಾರಿ ಕಛೇರಿಯು ಜನಸಾಮಾನ್ಯರಿಗೆ ಮತ್ತಷ್ಟು ಆರಾಮದಾಯಕವಾಗಿ ಸೇವೆ ಒದಗಿಸುವಂತಾಗಲಿ, ಕಛೇರಿಯ ಕೆಲಸಕಾರ್ಯಗಳು ಸುಗಮವಾಗಿ ಸಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.


