ಯುವಜನತೆಯನ್ನೇ ಆವರಿಸುತ್ತಿದೆಯಾ ಮಾದಕ ಜಾಲ? ಅಂಕೋಲಾದಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕ ಸೆರೆ..

News Desk
1 Min Read

ಅಂಕೋಲಾ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಕೂಲಿ ಕಾರ್ಮಿಕನೋರ್ವನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಕೋಲಾ ತಾಲೂಕಿನ ಹಳವಳ್ಳಿ ಸಮೀಪದ ಆದ್ರಳ್ಳಿಯ ನಿವಾಸಿ, 25 ವರ್ಷದ ಸಂತೋಷ್ ಕೃಷ್ಣ ಸಿದ್ಧಿ ಎಂಬಾತನೇ ಪ್ರಕರಣದ ಆರೋಪಿಯಾಗಿದ್ದಾನೆ.

ನವೆಂಬರ್ 01, 2026 ರಂದು ಸಂಜೆ ಸುಮಾರು 6:15ರ ವೇಳೆಗೆ ಈ ಘಟನೆ ನಡೆದಿದೆ. ಅಂಕೋಲಾ ಶಹರದ ಹೆದ್ದಾರಿಯಿಂದ ಶ್ರೀ ವೆಂಕಟ್ರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಂತೋಷ್ ಮಾದಕ ವಸ್ತು ಸೇವಿಸಿದಂತೆ ಕಂಡುಬಂದಿದ್ದನು. ಈ ವೇಳೆ ಗಸ್ತಿನಲ್ಲಿದ್ದ ಅಂಕೋಲಾ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ-ನಿರೀಕ್ಷಕ ಗುರುನಾಥ ಹಾದಿಮನಿ ಅವರು ಆತನನ್ನು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಆತನ ಬಾಯಿಯಿಂದ ವಿಚಿತ್ರವಾದ ಘಾಟು ವಾಸನೆ ಬರುತ್ತಿರುವುದನ್ನು ಗಮನಿಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಿಸಿದಾಗ ತಾನು ಗಾಂಜಾ ಸೇವಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಯನ್ನು ಅಂಕೋಲಾ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಯುವಕ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಪಿಎಸ್‌ಐ ಗುರುನಾಥ ಹಾದಿಮನಿ ಅವರು ಸರ್ಕಾರದ ಪರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ 1985ರ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27(b) ಅಡಿಯಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 209/2026 ರಂತೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article