ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಮುಂದುವರಿದಿರುವುದರಿಂದ ಹಾಗೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಇಲಾಖೆಯ ಘನತೆ ಕಾಪಾಡಲು, ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಮರುಸ್ಥಾಪಿಸುವ ದಿಟ್ಟ ಹೆಜ್ಜೆಯಾಗಿ ದಿನಾಂಕ 20-07-2026 ರಂದು ಕಚೇರಿ ಆದೇಶದ ಮೂಲಕ ಮಹತ್ವದ ವರ್ಗಾವಣೆಗಳನ್ನು ಮಾಡಿದೆ.
ಸರ್ಕಾರದ ಈ ಆದೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗಣಿ ಇಲಾಖೆಗೂ ಮೇಜರ್ ಸರ್ಜರಿ ಮಾಡಲಾಗಿದ್ದು, ಅಕ್ರಮಗಳಿಗೆ ಕಡಿವಾಣ ಹಾಕುವ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಿರಿಯ ಭೂವಿಜ್ಞಾನಿ ಕಛೇರಿಯಲ್ಲಿದ್ದ ಹಳೆಯ ಅಧಿಕಾರಿಗಳಾದ ಶ್ರೀ ಜಯರಾಮ್ ಗಣಪತಿ ನಾಯಕ್ ಅವರನ್ನು ಬಳ್ಳಾರಿಗೆ, ಶ್ರೀ ಮಂಜುನಾಥ್ ದೇವಾಡಿಗ ಕೋಲಾರ ಜಿಲ್ಲೆಗೆ, ಶ್ರೀ ಹರೀಶ್ ಕೆ ಎಸ್ ಅವರನ್ನು ತುಮಕೂರಿಗೆ ಮತ್ತು ಶ್ರೀ ಸುಭಾಷ್ ಚಂದ್ರ ಎಸ್ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿಗೆ ಹೀಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಇವರುಗಳ ಜಾಗಕ್ಕೆ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹೊಸ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಇಲಾಖೆಯ ಪ್ರಮುಖ ಆದಾಯ ಸಂಗ್ರಹಣಾ ಕಾರ್ಯಗಳಿಗೆ ಯಾವುದೇ ಅಡಚಣೆಯಾಗದಂತೆ ಇವರು ತಕ್ಷಣವೇ ಹೊಸ ಹುದ್ದೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಕಛೇರಿಗೆ ನೂತನವಾಗಿ ನಿಯೋಜನೆ ಗೊಂಡಿರುವ ಶ್ರೀ ಕೃಷ್ಣಮೂರ್ತಿ ಬಿ.ಎನ್., ಶ್ರೀ ಅಬ್ದುಲ್ ಹಫೀಜ್ ಶೇಖ್, ಶ್ರೀಮತಿ ರೂಪ ಸಿ.ಎಚ್ ಮತ್ತು ಶ್ರೀಮತಿ ಸುಷ್ಮಾ ಶಶಿ ಅವರ ಮೇಲೆ ಇದೀಗ ಬಹುದೊಡ್ಡ ಜವಾಬ್ದಾರಿ ಇದೆ. ಸರ್ಕಾರವು ತನ್ನ ಕಚೇರಿ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ಈ ಹಿಂದಿನಿಂದಲೂ ಇಲಾಖೆಯಲ್ಲಿ ಬೇರುಬಿಟ್ಟಿರಬಹುದಾದ ಸ್ಥಳೀಯ ಮಟ್ಟದ ಏಕಸ್ವಾಮ್ಯವನ್ನು ಮುರಿದು, ಸಾಂಸ್ಥಿಕ ಅಕ್ರಮ ಚಟುವಟಿಕೆಗಳಿಗೆ ಈ ನೂತನ ಅಧಿಕಾರಿಗಳು ಕಟ್ಟುನಿಟ್ಟಿನ ಬ್ರೇಕ್ ಹಾಕಬೇಕಿದೆ. ಯಾವುದೇ ಸಾರ್ವಜನಿಕ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಿ, ಉತ್ತರ ಕನ್ನಡ ಜಿಲ್ಲೆಯ ಗಣಿ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯನ್ನು ಸ್ಥಾಪಿಸುವ ನಿರೀಕ್ಷೆ ಈ ಹೊಸ ಅಧಿಕಾರಿಗಳ ಮೇಲಿದೆ.


