
ವರದಿ: ಕಿರಣ ಗಾಂವಕರ್
ಅಂಕೋಲಾ : ದೇಶಾದ್ಯಂತ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ.. ಅಂತೆಯೇ ಸೋಮವಾರ ಏಪ್ರಿಲ್ 14ರಂದು ಅಂಕೋಲಾದ ಕಾಂಗ್ರೆಸ ಪ್ರಮುಖರು ಪಟ್ಟಣದ ಗುರುಪ್ರಸಾದ್ ಹೋಟೆಲನಲ್ಲಿ ಸೇರಿ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ರವರ ಫೋಟೋಗೆ ಪುಷ್ಪ ನಮನವನ್ನು ಸಲ್ಲಿಸುವುದರೊಂದಿಗೆ ಸಂವಿಧಾನ ಶಿಲ್ಪಿಯ ಜಯಂತಿಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸನ ಪ್ರಮುಖರಾದ ಪಾಂಡುರಂಗ ಗೌಡ ರವರು ಮಾತನಾಡಿ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ವರ್ಷದ ಜನ್ಮದಿನ. ಈ ದೇಶ ಕಂಡ ಅಪ್ರತಿಮ ನಾಯಕರಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಒಬ್ಬರು. ನಮ್ಮ ದೇಶಕ್ಕೆ ಸಂವಿಧಾನ ಬರೆಯುವುದರ ಮೂಲಕ ಶೋಷಣೆಗೆ ಒಳಗಾದ ಜನರನ್ನು ಮೇಲಕೆತ್ತಲು ದೃಢಸಂಕಲ್ಪ ಮಾಡಿದ ಮಹಾನ್ ಮಾನವತಾವಾದಿ. ಒಂದು ಕಾಲದಲ್ಲಿ ಹರಿಜನ ಜನಾಂಗದ ಮೇಲೆ ಆಗುತ್ತಿರುವ ಶೋಷಣೆಯನ್ನು ದೃಢವಾಗಿ ಖಂಡಿಸಿದ್ದ ಇವರು ದೇಶಕ್ಕೆ ಸಮಾನತೆ, ಸಹ ಬಾಳ್ವೆ ಜೀವನವನ್ನು ನಡೆಸುವುದನ್ನು ದೇಶಕ್ಕೆ ಸಾರಿ ಹೇಳಿದ್ದಾರೆ. ಅವರ ತತ್ವ ಆದರ್ಶ. ಚಿಂತನೆ. ಹೋರಾಟದ ಹಾದಿಯನ್ನು ಇಂದಿನ ಯುವ ಪೀಳಿಗೆ ಅರಿಯುವಂತಾಗಬೇಕು ಎಂದು ಹೇಳಿದರು. ಜೊತೆಗೆ ಕಾರ್ಯಕ್ರಮಕ್ಕೆ ಬಂದವರನ್ನು ಸ್ವಾಗತಿಸಿದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿನೋದ. ಬಿ ನಾಯಕರು ಮಾತನಾಡಿ ಭಾರತ ದೇಶ ಕಂಡ ಮಹಾನ್ ವ್ಯಕ್ತಿ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತವನ್ನು ನಡೆಸುವ ಹಿನ್ನೆಲೆಯಲ್ಲಿ ಸಂವಿಧಾನ ರಚನೆಯನ್ನು ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೋಬ್ಬರಿ 68 ಭಾಷೆಯನ್ನು ಬಲ್ಲವರಾಗಿದ್ದರು. ಅವರ ಜೀವಿತಾವಧಿಯಲ್ಲಿ ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದ ಮಹಾಪುರುಷರು ಇವರು.ಬಾಬಾ ಸಾಹೇಬ್ ಅಂಬೇಡ್ಕರವರು ನಡೆಸಿದ ಜೀವನದ ಆದರ್ಶದಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ನಮ್ಮ ಜೀವನದಲ್ಲಿ ಅಗತ್ಯವಾಗಿ ರೂಡಿಸಿಕೊಳ್ಳೋಣ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.

ಕಾಂಗ್ರೆಸ್ಸಿನ ತಾಲೂಕ ಮಹಿಳಾ ಅಧ್ಯಕ್ಷೆ ಶ್ರೀಮತಿ ಸುಜಾತ ಗಾಂವಕರ ಮಾತನಾಡಿ ಸಂವಿಧಾನ ಕರಡನ್ನು ರಚಿಸಿ ಈ ದೇಶ ಅಲ್ಲ ಇಡೀ ಜಗತ್ತೇ ನಮ್ಮ ಸಂವಿಧಾನದತ್ತ ತಲೆಬಾಗುವಂತೆ ಮಾಡಿದೆ. ಭಾರತದ ಸಂವಿಧಾನ ಶಿಲ್ಪಿ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರದು ಶ್ರೇಷ್ಠ ವ್ಯಕ್ತಿತ್ವ. ಹರಿಜನ ಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್ ಅವರ ಬುದ್ಧಿವಂತಿಕೆ. ಚಾಣಾಕ್ಷತನ ಅವತ್ತಿನ ಸಂದರ್ಭದಲ್ಲಿ ಯಾರಿಗೂ ಇರಲಿಲ್ಲ. ಅವರ ಜೀವಿತಾವಧಿಯಲ್ಲಿ ಅಸ್ಪೃಶ್ಯತೆ ಯಾವ ರೀತಿ ಇತ್ತು. ಯಾವ ರೀತಿ ಈ ಆಸ್ಪೃಶ್ಯತೆಯನ್ನು ಹೋಗಲಾಡಿಸಬೇಕು ಎಂಬ ಚಿಂತನೆಯನ್ನು ಮಾಡಿ. ಆ ಚಿಂತನೆಯ ಮೂಲಕವೇ ಭಾರತಕ್ಕೆ ಸಂವಿಧಾನವನ್ನು ರಚನೆ ಮಾಡಿದರು. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ನ ವಿವಿಧ ಘಟಕದ ಪುರುಷ ಹಾಗೂ ಮಹಿಳಾ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
………

